ಸಾರಾಂಶ
ನಿಗದಿಯಂತೆ ಕಾಲಮಿತಿಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕು ಮತ್ತು ಯಾವುದೇ ರೀತಿಯಲ್ಲಿ ಅನುದಾನ ಲ್ಯಾಪ್ಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಧಾರವಾಡ:
ವಿವಿಧ ಇಲಾಖೆಗಳ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಮಾರ್ಚ್ 2025ರೊಳಗೆ ಬಳಕೆ ಮಾಡಿಕೊಂಡು ಕ್ರಿಯಾಯೋಜನೆ ಅನುಸಾರ ನಿಗದಿತ ಗುರಿ ಮತ್ತು ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ 2023-24ನೇ ಸಾಲಿನ ನವೆಂಬರ್ ಅಂತ್ಯದ ವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳ ಎಸ್‌ಸಿಎಸ್‌ಎ ಮತ್ತು ಟಿಎಸ್‌ಎ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ಮಾತನಾಡಿದರು.ನಿಗದಿಯಂತೆ ಕಾಲಮಿತಿಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕು ಮತ್ತು ಯಾವುದೇ ರೀತಿಯಲ್ಲಿ ಅನುದಾನ ಲ್ಯಾಪ್ಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ನಿಯಮಾನುಸಾರ ಕೆಲವು ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಶಾಸಕರ ಅಧ್ಯಕ್ಷತೆಯ ಸಮಿತಿಗಳ ಸಭೆಗಳನ್ನು ಶೀಘ್ರದಲ್ಲಿ ನಿಗದಿಗೊಳಿಸಿ, ಫಲಾನುಭವಿಗಳ ಪಟ್ಟಿಗೆ ಶಾಸಕರಿಂದ ಅನುಮೋದನೆ ಪಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದು ಈ ಕುರಿತು ಜನರಿಗೆ ಜಾಗೃತಿ ಮೂಡಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಹೇಳಿದರು.ಸಭೆಗೆ ಕಾರಣ ತಿಳಿಸದೇ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಉತ್ತರ ಪಡೆಯುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಇದೇ ವೇಳೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಫೋಕ್ಸೊ ಮತ್ತು ಎಸ್ಸಿ-ಎಸ್ಟಿ ಹಾಗೂ ಇತರೆ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ವಿಲೇವಾರಿಗೊಳಿಸಲು ಕ್ರಮವಹಿಸಬೇಕು. ಬಾಕಿ ಇರುವ ಹಳೆಯ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ನ್ಯಾಯ ತೀರ್ಮಾನಕ್ಕೆ ಒಳಪಡುವಂತೆ ಸರ್ಕಾರಿ ಅಭಿಯೋಜಕರು, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಮಾತನಾಡಿ, ಸೆಪ್ಟೆಂಬರ್ ವರೆಗೆ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 35 ಪ್ರಕರಣ ದಾಖಲಾಗಿದ್ದು, ಎರಡು ಪ್ರಕರಣಗಳಿಗೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. 60 ದಿನಗಳ ಅವಧಿ ಮೀರಿದ್ದು, ಉಳಿದ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಜಿಲ್ಲಾಧಿಕಾರಿಗೆ ಪೂರಕ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಸ್ವಾಗತಿಸಿದರು.