ಮುದ್ದೇಬಿಹಾಳ ತಾಲೂಕಿನಾದ್ಯಂತ ಡಿ.21 ರಿಂದ 24 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ತಹಸೀಲ್ದಾರ್ ಕೀರ್ತಿ ಚಾಲಕ ಪಾಲಕರಲ್ಲಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನಾದ್ಯಂತ ಡಿ.21 ರಿಂದ 24 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ತಹಸೀಲ್ದಾರ್ ಕೀರ್ತಿ ಚಾಲಕ ಪಾಲಕರಲ್ಲಿ ಮನವಿ ಮಾಡಿದರು.ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪಲ್ಸ್ ಪೋಲಿಯೋ ಲಸಿಕಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ.21 ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಹಾಕುತಿದ್ದು, ನಂತರ 3ದಿನ ಮನೆ ಮನೆಗೆ ತೆರಳಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಪೋಲಿಯೋ ಮಾರಕ ರೋಗವಾಗಿದ್ದು 5 ವರ್ಷದೊಳಗಿನ ಯಾವುದೇ ಮಗು ಎರಡು ಹನಿ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಲಸಿಕಾ ಅಭಿಯಾನದ ಎರಡು ದಿನ ಮುನ್ನ ಎಲ್ಲ ಲಸಿಕಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರತಿ ಗ್ರಾಮಗಳಲ್ಲಿ ಕರಪತ್ರ, ಡಂಗೂರ ಸಾರುವ ಮೂಲಕ ಸಾರ್ವಜನಿಕರಿಗೆ ಮೂಡಿಸಬೇಕು ಎಂದರು.ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆಯೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕರು ಅಭಿಯಾನದಲ್ಲಿ ಎಲ್ಲರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ಪಲ್ಸ್ ಪೋಲಿಯೊ ಆಂದೋಲನ ಕುರಿತು ಡಾ.ಸತೀಶ್ ತಿವಾರಿ ತಾಲೂಕು ಆರೋಗ್ಯ ಅಧಿಕಾರಿ ಮಾತನಾಡಿ ತಾಲೂಕಿನಾದ್ಯಂತ 5 ವರ್ಷದೊಳಗಿನ ಒಟ್ಟು 39,370 ಮಕ್ಕಳು ಲಸಿಕೆ ಪಡೆಯಲಿದ್ದು, ಒಟ್ಟು 207 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ 6 ಮೊಬೈಲ್ ಟೀಮ್‌ಗಳನ್ನೂ ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್‌ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್‌ಮಟ್ಟದ ವ್ಯಾಪ್ತಿಯ ಮನೆಗಳಿಗೆ ತೆರಳಿ ಪೋಲಿಯೋ ಹನಿ ಹಾಕಲಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕೆ 414 ಸಿಬ್ಬಂದಿ, 40 ಜನಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.ತಾಲೂಕು ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞರಾದ ಡಾ.ಪರಶುರಾಮ್ ವಡ್ಡರ, ವೈದ್ಯರಾದ ಡಾ.ಪ್ರವೀಣ್ ಸುಣಕಲ್ ಡಾ. ಭಾಗ್ಯಶ್ರೀ ಬಿರಾದಾರ ಡಾ.ರೇಖಾ ಹಯ್ಯಳ ಕೃಷಿ ಅಧಿಕಾರಿಗಳಾದ ಸುರೇಶ್ ಬಾವಿಕಟ್ಟಿ, ಶಿಕ್ಷಣ ಇಲಾಖೆಯ ಎಂ.ಎಂ ಬೆಳಗಲ್, ಪಿ.ಎ ಬಾಳಿಕಾಯಿ, ತಾಪಂ ಅಧಿಕಾರಿ ಖೂಬಾಸಿಂಗ್ ಜಾದವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಕ್ಷ್ಮಿ ಬಡಿಗೇರ, ಪೊಲೀಸ್ ಇಲಾಖೆಯ ಕೆ.ಎಸ್ ಅಸ್ಕಿ, ಸಮಾಜ ಕಲ್ಯಾಣ ಇಲಾಖೆ ಬಸಂತಿಮಠ, ಪುರಸಭೆಯ ವಿನೋದ್ ಜಿಂಗಾಡೆ, ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ಸ್ ಪ್ರಾ.ಲಿ ಯರಗಲ್ಲ ಸಿಬ್ಬಂದಿ ವೀರಣ್ಣ ಹೆಬ್ಬಾಳ, ಬಿಸಿಎಂ ಹಾಸ್ಟೆಲ್ ಸಿಬ್ಬಂದಿ ಭೀಮಶಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಸಿ.ಎಸ್ ಜಾರೆಡ್ಡಿ, ಎಂ.ಎಸ್ ಗೌಡರ, ಎಸ್.ಸಿ ರುದ್ರವಾಡಿ, ಪ್ರಶಾಂತ್ ಕಡಿ ಸೇರಿದಂತೆ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.