ಮಾಂಬಳ್ಳಿ ಹೆದ್ದಾರಿ ಬೈಪಾಸ್ ಸೇತುವೆ ತಡೆಗೋಡೆ ಕುಸಿತ

| Published : Aug 26 2025, 01:04 AM IST

ಮಾಂಬಳ್ಳಿ ಹೆದ್ದಾರಿ ಬೈಪಾಸ್ ಸೇತುವೆ ತಡೆಗೋಡೆ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ವರ್ಷದ ಹಿಂದೆಯಷ್ಟೇ ಲೋಕಾರ್ಪಣೆಗೊಂಡಿದ್ದ ಉತ್ತಂಬಳ್ಳಿ ಮೂಲಕವಾಗಿ ಹಾದು ಹೋಗುವ ಹೆದ್ದಾರಿಯ ಬೈಪಾಸ್ ಸಂಪರ್ಕದ ಸೇತುವೆಯ ತಡೆಗೋಡೆ ಕಳಪೆ ಕಾಮಗಾರಿಯಿಂದಾಗಿ ದಿಢೀರ್ ಕುಸಿತಗೊಂಡಿದೆ. ಸದ್ಯ ಜಿಲ್ಲಾಡಳಿತ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಜಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಒಂದು ವರ್ಷದ ಹಿಂದೆಯಷ್ಟೇ ಲೋಕಾರ್ಪಣೆಗೊಂಡಿದ್ದ ಉತ್ತಂಬಳ್ಳಿ ಮೂಲಕವಾಗಿ ಹಾದು ಹೋಗುವ ಹೆದ್ದಾರಿಯ ಬೈಪಾಸ್ ಸಂಪರ್ಕದ ಸೇತುವೆಯ ತಡೆಗೋಡೆ ಕಳಪೆ ಕಾಮಗಾರಿಯಿಂದಾಗಿ ದಿಢೀರ್ ಕುಸಿತಗೊಂಡಿದೆ. ಸದ್ಯ ಜಿಲ್ಲಾಡಳಿತ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಜಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಪಟ್ಟಣಕ್ಕೆ ಆಗಮಿಸುವ ಮುನ್ನ ನರೀಪುರ- ಹರಳೆ ಗ್ರಾಮದ ಕ್ರಾಸ್ ನಿಂದ ನೇರವಾಗಿ ಉತ್ತಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇತುವೆ ಇದಾಗಿತ್ತು. ತಡೆಗೋಡೆ ಕುಸಿತದಿಂದ ವಾಹನ ಸವಾರರು, ನಾಗರಿಕರು ಆತಂಕಗೊಂಡಿದ್ದು, ಸದ್ಯ ಜಿಲ್ಲಾಡಳಿತ ಸೂಚನೆ ಮೇರೆಗೆ ಅಗರ, ಮಾಂಬಳ್ಳಿ ಪೊಲೀಸರು ಸರ್ವೀಸ್ ರಸ್ತೆಯಲ್ಲೇ ವಾಹನ ಸವಾರರು ಸಂಚರಿಸಬೇಕು ಎಂಬ ಸೂಚನಾ ಫಲಕ ಅಳವಡಿಸಿದ್ದಾರೆ. ಕಾಮಗಾರಿ ಕೈಗೊಂಡ ವರ್ಷದಲ್ಲೇ ಸೇತುವೆ ಕುಸಿದಿದ್ದು, ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಸ್ಥಳಕ್ಕೆ ಶಾಸಕ ಎ. ಆರ್. ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಡಿವೈಎಸ್ಪಿ ಧಮೇಂದ್ರ, ಪಿಎಸ್ಐ ಸುಪ್ರೀತ್ , ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಹೊಂಗನೂರು ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಾಸಕ ಎ. ಆರ್. ಕೃಷ್ಣಮೂರ್ತಿ ಮಾತನಾಡಿ, ಸೇತುವೆಯ ಕೆಳಭಾಗದಲ್ಲಿ ಕಾಮಗಾರಿಗಾಗಿ ಹಾಕಲಾಗಿದ್ದ ಕಲ್ಲು, ಮಣ್ಣು, ಕಾಂಕ್ರಿಟ್ ಸಮೇತ ಕುಸಿತಗೊಂಡಿರುವುದನ್ನು ವೀಕ್ಷಿಸಿ ಕಳಪೆ ಕಾಮಗಾರಿಯಿಂದ ಇದು ಸಂಭವಿಸಿದೆ, ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಅಸಮಾಧಾನ ಹೊರಹಾಕಿದರು.

ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದ ಸತ್ತೇಗಾಲ ಸೇತುವೆ ಬಹಳ ಗಟ್ಟಿ ಮುಟ್ಟಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಉತ್ತಮ ಸೇತುವೆ, ಹೆದ್ದಾರಿ ಕಾಮಗಾರಿ ಕೈಗೊಂಡಿದ್ದಾರೆ. ನಾನು ಸಹ ಬಹಳ ಕಡೆ ನೋಡಿದ್ದೇನೆ, ಆದರೆ ಉತ್ತಂಬಳ್ಳಿಯ ಬಳಿಯ ಹೆದ್ದಾರಿ ಸೇತುವೆ ತಡೆಗೋಡೆ, ರಸ್ತೆ ಗುಣಮಟ್ಟದವಿಲ್ಲದ ಕಾರಣ ಕುಸಿದಿದೆ ಎಂದರು.

ಕೂಡಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಲ್ಲಿಗೆ ಭೇಟಿ ನೀಡಿ, ಕಳಪೆ ಕಾಮಗಾರಿ ವೀಕ್ಷಿಸಿ ಸಂಬಂಧಿಸಿದವರಿಗೆ ಬಿಲ್ ತಡೆ ಹಿಡಿದು ಪುನಃ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಸಂಸದ ಸುನೀಲ್ ಬೋಸ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಗುಣಮಟ್ಟ ಪರಿಶೀಲನೆ ನಡೆಸಬೇಕು. ಹಿಂದೆ ಈ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ನಿಧನರಾದ ಹಿನ್ನೆಲೆ ಕಾಮಗಾರಿ ವಿಳಂಬವಾಗಿತ್ತು, ನಂತರ ಚಂಡೀಗಡದ ಗುತ್ತಿಗೆದಾರ ಸರ್ದಾರ್ ಜೀ ಕಾಮಗಾರಿ ಪುನರ್ ಪ್ರಾರಂಭಿಸಿದರು. ಆದರೆ ವರ್ಷ ತುಂಬುವ ಮುನ್ನವೇ ತಡೆಗೋಡೆ ಕುಸಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.