ಗಣಪತಿ ತಯಾರಿಯಲ್ಲಿ ತರೀಕೆರೆ ಕಲಾವಿದರ ವೈಶಿಷ್ಟ್ಯ

| Published : Aug 26 2025, 01:04 AM IST

ಗಣಪತಿ ತಯಾರಿಯಲ್ಲಿ ತರೀಕೆರೆ ಕಲಾವಿದರ ವೈಶಿಷ್ಟ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾದ್ರಪದ ಮಾಸ ಬಂತೆಂದರೆ ಮನೆಮನೆಯಷ್ಟೇ ಅಲ್ಲ ಚಿಣ್ಣರಿಂದ ಹಿಡಿದೂ ಎಲ್ಲರೂ ಗಣಪನನ್ನು ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಿ ನೇಮದಿಂದ ಆರಾಧಿಸಿ ವಿಜೃಂಭಣೆಯಿಂದ ವಿಸರ್ಜಿಸುವ ಹಬ್ಬ ನಾಡಿನೆಲ್ಲೆಡೆ ಕಳೆಕಟ್ಟುತ್ತದೆ.

ಅನಂತ ನಾಡಿಗ್

ಕನ್ನಡಪ್ರಭ ವಾರ್ತೆ ತರೀಕೆರೆ

ಬಾದ್ರಪದ ಮಾಸ ಬಂತೆಂದರೆ ಮನೆಮನೆಯಷ್ಟೇ ಅಲ್ಲ ಚಿಣ್ಣರಿಂದ ಹಿಡಿದೂ ಎಲ್ಲರೂ ಗಣಪನನ್ನು ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಿ ನೇಮದಿಂದ ಆರಾಧಿಸಿ ವಿಜೃಂಭಣೆಯಿಂದ ವಿಸರ್ಜಿಸುವ ಹಬ್ಬ ನಾಡಿನೆಲ್ಲೆಡೆ ಕಳೆಕಟ್ಟುತ್ತದೆ.

ನಲ್ಮೆಯಿಂದಲೋ, ಭಕ್ತಿಯಿಂದಲೋ, ಇಷ್ಟದಿಂದಲೂ ಪೂಜಿಸಲ್ಪಡುವ ಗಣೇಶನ ಮೂರ್ತಿ ತಯಾರಿಕೆಯಲ್ಲೂ ಅಷ್ಟೆ ಶ್ರದ್ಧೆ, ಭಕ್ತಿ, ಸಂಪ್ರದಾಯ, ಪರಂಪರೆ ಇರುವ ಹಿನ್ನೆಲೆಯಲ್ಲಿ ಈ ಹಬ್ಬದ ವೈಷಿಷ್ಟ್ಯವೇ ಬೇರೆ. ಅದರಲ್ಲೂ ತರೀಕೆರೆಯ ಕಲಾವಿದರ ಕೈಚಳಕದಲ್ಲಿ ಒಡಮೂಡುವ ಏಕದಂತದನ ವಿಶೇಷ ವಿಗ್ರಹಗಳು ನಾಡಿನಾದ್ಯಂತ ಹೆಸರು ಮಾಡಿವೆ.

ಇಲ್ಲಿನ ಕಲಾವಿದರು ಬಹಳ ಹಿಂದಿನಿಂದಲೂ ಪರಂಪರಾನುಗತವಾಗಿ ಭಕ್ತಜನರ ಅಪೇಕ್ಷೆಗೆ ಅನುಗುಣವಾಗಿ ಬಹು ಸುಂದರ ವಾದ ಸ್ವರ್ಣಗೌರಿ ಮತ್ತು ಗಣಪತಿ ಮೂರ್ತಿಗಳನ್ನು ತಮ್ಮ ಹಿರಿಯರಿಂದ ಪಡೆದ ಅನುಭವದ ಆಧಾರದಲ್ಲಿ ಸಿದ್ದಗೊಳಿಸುವಲ್ಲಿ ಪ್ರಾವೀಣರು. ಹಾಗಾಗಿಯೇ ಈ ಕಲಾವಿದರು ತಯಾರಿಸಿದ ಮನ ಸೆಳೆಯುವ ಮಣ್ಣಿನ ಗಣಪತಿ ಮೂರ್ತಿ ಗಳು ತರೀಕೆರೆ ಸೇರಿದಂತೆ ಸುತ್ತಮುತ್ತ ಹಾಗೂ ರಾಜ್ಯಾದ್ಯಂತ ಬಹು ಬೇಡಿಕೆಗೆ ಪಾತ್ರವಾಗಿದೆ.

ತಮ್ಮ ಈ ಪ್ರಾಚೀನ ಕಲೆಯನ್ನು ತರೀಕೆರೆ ಕಲಾವಿದರು ಉಳಿಸಿ, ಬೆಳೆಸಿ ಪೋಷಿಸಿಕೊಂಡು ಬರುತ್ತಿದ್ದಾರೆ. ಗಣಪತಿ ತಯಾರಿಕೆಯನ್ನು ಅಷ್ಟೆ ಶಾಸ್ತ್ರೋಕ್ತವಾಗಿ ಆರಂಭಿಸುವ ಅವರ ನಂಬಿಕೆ ಇದಕ್ಕೆ ಮೂಲ. ಹಬ್ಬಕ್ಕೂ ಬಹಳಷ್ಟು ಮುನ್ನವೇ ಈ ಮೂರ್ತಿ ನಿರ್ಮಾಣ ಕೆಲಸವನ್ನು ಕಲಾವಿದರು ಆರಂಭಿಸುವುದು ವಾಡಿಕೆ.

ಅದರಂತೆ ಸುಮಾರು ಐದಾರು ತಿಂಗಳ ಮುಂಚಿತವಾಗಿಯೇ ಮೂರ್ತಿ ನಿರ್ಮಿಸಲು ಅಗತ್ಯವಾದ ಮಣ್ಣನ್ನು ತಂದು ಅದನ್ನು ಸರಿಯಾದ ರೀತಿಯಲ್ಲಿ ಹದಗೊಳಿಸಿ ವಿವಿಧ ವಿನ್ಯಾಸ ಹಾಗೂ ಗುಣಮಟ್ಟದ ವಿಗ್ರಹ ತಯಾರಿಸಲು ಆಗುವಂತೆ ಒಪ್ಪಗೊಳಿಸುವ ಕೆಲಸವನ್ನು ಅಸ್ತೆಯಿಂದ ಮಾಡಿ ಮುಗಿಸಿ ವಿಘ್ನ ನಿವಾರಕನಿಗೆ ಒಂದು ಗೊತ್ತುಪಡಿಸಿದ ಶುಭದಿನ ಶುಭ ಗಳಿಗೆಯಲ್ಲಿ ಪೂಜೆ ಸಲ್ಲಿಸಿ ಗಣಪತಿ ಸಿದ್ಧಗೊಳಿಸಲು ಅಣಿಯಾಗುತ್ತಾರೆ.

ಕಲಾವಿದರು ಹಿಂದಿನಿಂದಲೂ ತಂದು ಪೂಜಿಸುವ ಪೀಠದ ಮೇಲಿನ ಗಣಪತಿ, ಕೇದಿಗೆ ಗಣಪತಿ, ವಲ್ಲಿ ಸೆರಗು ಗಣಪತಿ, ನಾಟ್ಯ ಗಣಪತಿ, ಆರೋಗ್ಯ ದೈವ ಗಣಪತಿ, ನವಿಲಿನ ಗಣಪತಿ, ಕಡುಬು, ವಾಹನ ಇಲಿ, ಹೊಟ್ಟೆಗೆ ಹಾವುಗಳನ್ನು, ಬಲ ಭಾಗದ ಸೊಂಡಿಲು, ಎಡ ಭಾಗದ ಸೊಂಡಿಲಿನ ಗಣಪತಿ, ಹಣೆಯಲ್ಲಿ ವಿಭೂತಿಯ ಮೂರು ಪಟ್ಟಿ ಧರಿಸಿದ, ಚಂದ್ರ, ತಿಲಕ ಹೀಗೆ ಅಡಿಯಿಂದ ಮುಡಿಯವರೆಗೆ ನಾನಾ ಅಲಂಕಾರ, ವಿಶೇಷಗಳ ಗಣಪತಿಯನ್ನೆ ಬೇಕೆನ್ನುವವರಿಗೆ ಅದೇ ಮಾದರಿಯ ಮೂರ್ತಿಗಳನ್ನು ತಯಾರಿಸಿಕೊಡುತ್ತಾರೆ.

ತರೀಕೆರೆ ಕಲಾವಿದರಾದ ಈಶ್ವರಪ್ಪ, ಮಹದೇವಪ್ಪ, ಪುಟ್ಟಪ್ಪನವರು ತಿಂಗಳು ಗಟ್ಟಲೇ ಶ್ರಮ ಪಟ್ಟು ಶ್ರದ್ಧೆಯಿಂದ ಪರಿಸರ ಪ್ರೇಮಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಚಿತ್ತಾಕರ್ಷಕವಾಗಿ ಅಣಿಗೊಳಿಸುತ್ತಾರೆ. ತಿಂಗಳು ಗಟ್ಟಲೇ ಕಲಾವಿದರು ಶ್ರಮ ಪಟ್ಟು ಶ್ರದ್ಧೆಯಿಂದ ತಿದ್ದಿ ತೀಡುವ ಗೌರಿ ಗಣೇಶ ಮೂರ್ತಿಗಳು ಮಕ್ಕಳು, ಯುವಕರಿಂದ ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪನೆಗೊಂಡು ಅದ್ಧೂರಿ ಅಲಂಕಾರದೊಂಡಿಗೆ ಪೂಜಿಸಲ್ಪಡುತ್ತವೆ.

ತರೀಕೆರೆ ಸುತ್ತಮುತ್ತ ಲಕ್ಕವಳ್ಳಿ, ರಂಗೇನಹಳ್ಳಿ, ಲಿಂಗದಹಳ್ಳಿ, ನಂದಿಬಟ್ಲು, ಭದ್ರಾವತಿ, ಅಂತರಗಂಗೆ, ಅಜ್ಜಂಪುರ, ಕಡೂರು, ಬೀರೂರು, ಚಿಕ್ಕಮಗಳೂರು, ಅರಸೀಕೆರೆ, ಹಾಸನ, ಹೊಸದುರ್ಗ, ಹೊಳಲ್ಕೆರೆ ಹಾಗೂ ರಾಜ್ಯದೆಲ್ಲೆಡೆಯಿಂದ ತರೀಕೆರೆಗೆ ಬಂದು ತಮಗಿಷ್ಟವಾದ ಗಣಪತಿ ಮೂರ್ತಿಗಳನ್ನು ಖರೀದಿಸಿ ಮಂಗಳವಾದ್ಯದ ಮೆರವಣಿಗೆ ಮೂಲಕ ತೆಗೆದು ಕೊಂಡು ಹೋಗಿ ಆರತಿ ಎತ್ತಿ ಮನೆ ತುಂಬಿಸಿಕೊಂಡು ತಳಿರು, ತೋರಣ, ಬಣ್ಣ ಬಣ್ಣದ ಗೆಜ್ಜೆ ವಸ್ತ ಸಹಿತವಾಗಿ ಅಲಂಕರಿಸಿ ವಿವಿಧ ಭಕ್ಷ್ಯ ಪ್ರಿಯನಾದ ಗಣೇಶನಿಗೆ ಕಡುಬು, ಕೋಡುಬಳೆ, ಚಕ್ಕುಲಿ, ತೇನುಕೊರಳು, ಹೋಳಿಗೆ, ಕೀರು, ಕ್ಷೀರ, ಪರಮಾನ್ನ, ವಿವಿಧ ಬಗೆಯ ಪದಾರ್ಥ, ಹೂವು ಹಣ್ಣುಗಳನ್ನು ನೇವೇಧ್ಯವಾಗಿ ಅರ್ಪಿಸಿ ಭಕ್ತಿಯಿಂದ ಸ್ತುತಿಸಿ ವ್ರತ, ನೇಮ ನಿಷ್ಠೆಯಿಂದ ಪೂಜಿಸುತ್ತಾರೆ.