ಸಾರಾಂಶ
ಕನ್ನಡ ಪ್ರಭವಾರ್ತೆ ಚಿತ್ರದುರ್ಗ
ಎರಡು ದಿನಗಳ ಹಿಂದ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟಿಸಿದ್ದ ಮಾದಿಗ ಮುಖಂಡರ ಸಭೆಯ ನೆನಪು ಮಾಸುವ ಮುನ್ನವೇ ಭಾರತೀಯ ಜನತಾ ಪಕ್ಷ ಮಾದಿಗ ರಾಷ್ಟ್ರೀಯ ಮೀಸಲು ಹೋರಾಟ ಸಮಿತಿಯ ಮಂದಕೃಷ್ಣ ಮಾದಿಗ ಅವರನ್ನು ಚಿತ್ರದುರ್ಗಕ್ಕೆ ಕರೆ ತಂದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮಂದಕೃಷ್ಣ ಮಾದಿಗ ಆಂಧ್ರದಲ್ಲಿ ನಡೆಸಿದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಹಾಗಾಗಿ ಮಂದಕೃಷ್ಣ ಮಾದಿಗ ಚಿತ್ರದುರ್ಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವುದು ಕಾಂಗ್ರೆಸ್ ನಲ್ಲಿ ತಳಮಳಕ್ಕೆ ಕಾರಣವಾಗಿದೆ.ಮಾದಿಗರಿಗೆ ಒಳಮೀಸಲಾತಿ ಬೇಕೆಂಬ ಪ್ರಧಾನ ವಿಷಯ ಮುಂದಿಟ್ಟುಕೊಂಡು ಆಂಧ್ರ ಪ್ರದೇಶದಲ್ಲಿ ಕಳೆದ ಎರಡುವರೆ ದಶಕಗಳಿಂದ ಮಂದಕೃಷ್ಣ ಮಾದಿಗ ಹೋರಾಟ ನಡೆಸಿದ್ದರು. ಈ ಹೋರಾಟದ ಪ್ರೇರಣೆಯಿಂದಾಗಿ ಕರ್ನಾಟಕದಲ್ಲಿಯೂ ಒಳಮೀಸಲು ಹೋರಾಟಗಳು ಆರಂಭವಾಗಿದ್ದವು. ಹೋರಾಟದ ಕಿಚ್ಚಿಗೆ ಆರಂಭದಲ್ಲಿ ಚಿತ್ರದುರ್ಗವೇ ವೇದಿಕೆ ಒದಗಿಸಿತ್ತು. ಇಂತಹ ನೆಲಕ್ಕೆ ಬಿಜೆಪಿ ಮಂದಕೃಷ್ಣ ಮಾದಿಗ ಅವರನ್ನು ಕರೆತಂದಿದೆ.
ಬುಧವಾರ ರಾತ್ರಿ ಚಿತ್ರದುರ್ಗದ ಐಶ್ವರ್ಯ ಫೋರ್ಟ ಸಭಾಂಗಣದಲ್ಲಿ ಮಂದಕೃಷ್ಣ ಮಾದಿಗ ಮಧ್ಯ ಕರ್ನಾಟಕದ ಪ್ರಮುಖ ಮಾದಿಗ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಸರಿಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಗಂಭೀರ ಚರ್ಚೆ ನಡೆಸಿದ ಮಂದಕೃಷ್ಣ ಮಾದಿಗ ಒಳಮೀಸಲಾತಿ ಪಡೆಯುವ ಸಂಬಂಧ ಸವೆಸ ಬೇಕಾದ ಸುದೀರ್ಘ ಹಾದಿಯ ಮಾದಿಗ ಮುಖಂಡರ ಮುಂದೆ ಹರವಿದರು ಎನ್ನಲಾಗಿದೆ. ಒಳ ಮೀಸಲು ವಿಚಾರದಲ್ಲಿ ಕೇಂದ್ರ ಸರ್ಕಾರದ್ದೆ ನಿರ್ಣಾಯಕ ಪಾತ್ರ. ಮಾದಿಗ ಸಮುದಾಯ ಭವಿಷ್ಯದ ಒಲವು, ನಿಲವುಗಳ ದೃಷ್ಟಿಯಿಂದ ರಾಜಕೀಯ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ. ನಮ್ಮ ಗುರಿ ತಲುಪಬೇಕಾದರೆ ಹಾದಿಯೂ ಸ್ಪಷ್ಟವಾಗಿದ್ದು ಎತ್ತ ಸಾಗಬೇಕು ಎಂಬ ಬಗ್ಗೆ ನೀವೇ ತೀರ್ಮಾನಕ್ಕೆ ಬನ್ನಿ. ಬಿಜೆಪಿ ಬೆಂಬಲಿಸುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲವೆಂದಿದ್ದಾರೆ.ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಲಕ್ಷದಷ್ಟು ಮಾದಿಗ ಸಮುದಾಯದ ಮತಗಳಿವೆ. ಈ ಎಲ್ಲ ಮತಗಳನ್ನು ಒಂದೇ ಕಡೆ ಗುಡ್ಡೆ ಹಾಕುವ ನಿಟ್ಟಿನ ಪ್ರಯತ್ನದ ಭಾಗವಾಗಿ ಬಿಜೆಪಿ ಮಂದಕೃಷ್ಣ ಮಾದಿಗ ಅವರನ್ನು ಕರೆತಂದಿದೆ. ಜನಸಂಖ್ಯಾ ಆಧಾರಿತ ಮೀಸಲು ವರ್ಗೀಕರಣಕ್ಕೆ ಮಾದಿಗ ಸಮುದಾಯ ಪಟ್ಟು ಹಿಡಿದು ಎರಡು ದಶಕಗಳಿಂದ ಕರ್ನಾಟಕದಲ್ಲಿ ಹೋರಾಟ ನಡೆಸುತ್ತಿದೆ. ಒಳ ಮೀಸಲು ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಂತಿಮ ಮುದ್ರೆ ಒತ್ತುವುದು ಬಾಕಿ ಇದೆ. ಕಾಂಗ್ರೆಸ್ ಒಳಮೀಸಲು ಪ್ರಕ್ರಿಯೆಯ ಸದಾ ಜೀವಂತವಾಗಿಡಲು ಯತ್ನಿಸುತ್ತದೆ ವಿನಹ ನ್ಯಾಯ ಕೊಡುವುದಿಲ್ಲ. ಹಾಗಾಗಿ ನಮ್ಮ ರಾಜಕೀಯ ಇಚ್ಚಾಶಕ್ತಿಗಳು ಸಮುದಾಯ ಏಳಿಗೆ ಕಡೆ ಹೊರಳುವುದು ಅನಿವಾರ್ಯವೆಂಬ ಸಂಗತಿಯ ಮಂದಕೃಷ್ಣ ಮಾದಿಗ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟು ಮಾದಿಗರು ಬಿಜೆಪಿಯತ್ತ ಮುಖ ಮಾಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮಟ್ಟಿಗೆ ಮಾದಿಗ ಸಮುದಾಯದಲ್ಲಿ ಅನೇಕ ಮುಖಂಡರು ಇರಬಹುದು. ಆದರೆ ಮಾದಿಗರಿಗೆ ಪ್ರತ್ಯೇಕ ಮೀಸಲಾತಿ ಬೇಕೆಂಬ ಕೂಗು ವ್ಯಾಪಕಗೊಳಿಸುವಲ್ಲಿ ಮಂದಕೃಷ್ಣ ಮಾದಿಗರ ಶ್ರಮ ಅಪಾರ. ಇದಕ್ಕಾಗಿ ಕರ್ನಾಟಕ, ಆಂದ್ರದಲ್ಲಿ ಅವರು ಮಾದಿಗರ ಸಂಘಟಿಸಿದ್ದರು. ಕರ್ನಾಟಕದ ಮಾದಿಗ ಸಮುದಾಯ ಮಂದಕೃಷ್ಣ ಮಾದಿಗರನ್ನು ಅಷ್ಟು ಸುಲಭವಾಗಿ ಮರೆಯಲಾರರು. ಒಳಮೀಸಲು ವಿಚಾರದಲ್ಲಿ ಮಂದಕೃಷ್ಣ ಮಾದಿಗರ ಹೋರಾಟ ಭವಿಷ್ಯದ ಮಾದಿಗರ ಬದುಕಿಗೆ ದಿಕ್ಸೂಚಿ ಎಂದು ಮಾದಿಗ ಸಮುದಾಯದ ಮುಖಂಡ ಮೋಹನ ಹೇಳಿದರು.ಚಿತ್ರದುರ್ಗದ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ನಡೆದ ಮಾದಿಗ ಮುಖಂಡರ ಸಭೆಯಲ್ಲಿ ಆಂಧ್ರದ ಮಂದಕೃಷ್ಣ ಮಾದಿಗ ಮಾತನಾಡಿದರು.