ವ್ಯಕ್ತಿಯೊಬ್ಬರ ಬೆತ್ತಲೆ ವೀಡಿಯೋ ಮಾಡಿ 50 ಲಕ್ಷ ರು. ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಕುರಿತು ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿಯ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ವ್ಯಕ್ತಿಯೊಬ್ಬರ ಬೆತ್ತಲೆ ವೀಡಿಯೋ ಮಾಡಿ 50 ಲಕ್ಷ ರುಪಾಯಿ ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಕುರಿತು ಇಬ್ಬರು ಮಹಿಳೆಯರೂ ಸೇರಿದಂತೆ 6 ಮಂದಿಯ ವಿರುದ್ಧ ಶನಿವಾರ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಡ್ಯ ಮೂಲದ ಮದ್ದೂರುವಿನ ಎಚ್.ಪಿ.ಮಹದೇವ್ (39) ಹಲ್ಲೆಗೆ ಒಳಗಾದವರು.
ಫೇಸ್ ಬುಕ್ ನಲ್ಲಿ ಪರಿಚಯವಾದ ಮಡಿಕೇರಿಯ ಮಹಿಳೆಯೊಬ್ಬರು ಕಷ್ಟ ಎಂದು ಹೇಳಿಕೊಂಡು ರು. 5 ಸಾವಿರ ಹಣ ಪಡೆದಿದ್ದರು. ನಂತರ ಹಣ ವಾಪಸ್ ಕೊಡುವುದಾಗಿ ಹೇಳಿ ಶುಕ್ರವಾರ ಮಡಿಕೇರಿಗೆ ಬರಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಳು. ರಾತ್ರಿ 11.45 ರ ಸುಮಾರಿನಲ್ಲಿ ಮನೆಗೆ ಬಂದ ಯುವತಿಯ ತಾಯಿ ಹಾಗೂ ಇತರ ನಾಲ್ವರು, ಯುವತಿ ಹಾಗೂ ಆಕೆಯ ತಾಯಿಯನ್ನು ಬೇರೆಡೆ ಕಳುಹಿಸಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ವೀಡಿಯೊ ಮಾಡಿಕೊಂಡು ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ.ಬಳಿಕ ಮಹದೇವ್ ಅಲ್ಲಿಂದ ತಪ್ಪಿಸಿಕೊಂಡು ಅರೆಬೆತ್ತಲೆ ಸ್ಥಿತಿಯಲ್ಲಿ ಠಾಣೆಗೆ ಬಂದು ದೂರು ನೀಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
----------------------------------------------------ಕೊಡಗಿನಲ್ಲಿ ಟವರ್‌ಗಳಿಗೆ ಬ್ಯಾಟರಿ ಸೆಟ್ ತ್ವರಿತವಾಗಿ ಅಳವಡಿಸಲು ಯದುವೀರ್ ಮನವಿ
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಲ್ಲಿ ದೂರ ಸಂಪರ್ಕ ಕ್ಷೇತ್ರಕ್ಕೆ ಹೆಚ್ಚುವರಿ ಸೌಲಭ್ಯ ಒದಗಿಸಬೇಕಾದ ಅಗತ್ಯವಿರುವುದರಿಂದ ಕೂಡಲೇ ಟವರ್‌ಗಳಿಗೆ ಬ್ಯಾಟರಿ ಸೆಟ್ ಅಳವಡಿಕೆ ಹಾಗೂ 15 ಪವರ್ ಪ್ಲಾಂಟ್ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ನೀಡಿದ ನಂತರ ಯದುವೀರ್ ಒಡೆಯರ್ ಈ ಮಾಹಿತಿ ನೀಡಿದ್ದಾರೆ.
ಕಳೆದ ಭಾರಿ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಂಬಗಳು ಧರೆಗುರುಳಿದಿದ್ದು, ಇದರಿಂದ ಸಾರ್ವಜನಿಕರಿಗೆ ಸಂಪರ್ಕ ಸಾಧಿಸಲು ಭಾರಿ ತೊಂದರೆ ಎದುರಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆದು ಮೂಲ ಸೌಕರ್ಯ ಹೆಚ್ಚಿಸಲು ಆಗ್ರಹಿಸಲಾಗಿತ್ತು ಎಂದರು.ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮನವಿ ಮಾಡಿದ್ದೇನೆ ಎಂದು ಸಂಸದರು ವಿವರಿಸಿದರು.
ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಅತಿ ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದರು.