ಮಂಗಳೂರು: ವಿವಿಧ ಸರ್ಕಾರಿ ಇಲಾಖೆಗಳ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿಸಲು ಜಮೀನನ್ನು ತ್ವರಿತವಾಗಿ ಮಂಜೂರುಗೊಳಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮೀರ್ ಶುಕ್ಲಾ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಗಳ ವಿದ್ಯಾರ್ಥಿಗಳಿಗೆ ನೂತನ ಹಾಸ್ಟೆಲ್ ಕಟ್ಟಡಗಳನ್ನು ಸರ್ಕಾರ ಮಂಜೂರುಗೊಳಿಸುತ್ತಿದ್ದು, ಹಾಸ್ಟೆಲ್ ಹೊಸ ಕಟ್ಟಡಗಳನ್ನು ಶೀಘ್ರವಾಗಿ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಜಮೀನು ಪಡೆಯಲು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಈ ವಿಷಯದಲ್ಲಿ ವಿಳಂಬವನ್ನು ಸಹಿಸಲಾಗದು ಎಂದು ಅವರು ತಿಳಿಸಿದರು.ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ ನಡೆಸಬೇಕು. ಆಹಾರ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಅವರು ಸೂಚಿಸಿದರು.
ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲಿಸಿದ ಸಮೀರ್ ಶುಕ್ಲಾ, ಗೃಹಲಕ್ಷ್ಮಿ ನೋಂದಣಿ ಬಾಕಿ ಇದ್ದವರನ್ನು ನೋಂದಣಿಗೊಳಿಸಲು ಕ್ರಮ ಕೈಗೊಳ್ಳಬೇಕು. ಗೃಹಲಕ್ಷ್ಮಿ ಮೊತ್ತವನ್ನು ತ್ವರಿತವಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.ಕೆ.ಎಸ್.ಆರ್.ಟಿ.ಸಿ 100 ಇವಿ ಬಸ್ಸುಗಳು ಮಂಗಳೂರಿಗೆ ಮಂಜೂರಾಗಿರುವುದರಿಂದ ಬಸ್ಸುಗಳನ್ನು ಖರೀದಿಸಿ ಚಾಲನೆಗೊಳಿಸಲು ತ್ವರಿತವಾಗಿ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಈಗಿಂದಲೇ ಕ್ರಮ ಕೈಗೊಳ್ಳಬೇಕೆಂದು ಅವರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ್ ಮಿಷನ್ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಜಿಲ್ಲೆಯಲ್ಲಿ 650 ಕಾಮಗಾರಿಗಳು ಪೂರ್ಣಗೊಂಡು, 482 ಕೋಟಿ ರು. ವೆಚ್ಚವಾಗಿ, ಶೇ.84ರಷ್ಟು ಪ್ರಗತಿಯಾಗಿದೆ. ಫೆಬ್ರವರಿ ತಿಂಗಳೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅವರು ಸೂಚಿಸಿದರು. ಜಲಜೀವನ್ ಕಾಮಗಾರಿ ಸಂದರ್ಭದಲ್ಲಿ ರಸ್ತೆ ಅಗೆತ, ರಸ್ತೆ ಕಡಿತ ಮತ್ತಿತರ ಸಮಸ್ಯೆಗಳನ್ನು ಕಾಮಗಾರಿ ಪೂರ್ಣಗೊಂಡ ನಂತರ ಸಮರ್ಪಕವಾಗಿ ದುರಸ್ತಿಗೊಳಿಸಬೇಕು ಎಂದು ತಿಳಿಸಿದರು.ಹರ್ ಘರ್ ಜಲ ಯೋಜನೆ ಕಾಮಗಾರಿ ಮುಗಿದ ನಂತರ ಗ್ರಾಮ ಸಭೆಗಳಲ್ಲಿ ದೃಢೀಕರಿಸಬೇಕು. ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ಇನ್ನೂ ಶುರು ಮಾಡದ ಬಗ್ಗೆ ಅವರು ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು ಇದ್ದರು.