ರೈತರು ತಮ್ಮ ಹೊಲದಲ್ಲಿನ ಎರೆಮಣ್ಣಿನಿಂದ ಎತ್ತುಗಳ ಮೂರ್ತಿಗಳನ್ನು ಮಾಡಿ, ಅಮಾವಾಸ್ಯೆಯ ದಿನ ಪೂಜಿಸಿ ನಂತರ ಮನೆಯ ಮಾಳಿಗೆಯ ಮೇಲೆ ಇಡುತ್ತಾರೆ.

ಮರಿಯಮ್ಮನಹಳ್ಳಿ: ಮಣ್ಣೆತ್ತಿನ ಅಮಾವಾಸ್ಯೆಯು ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಗಾಲದ ಆರಂಭದಲ್ಲಿ ಆಚರಿಸಲಾಗುವ ಪ್ರಮುಖ ರೈತರ ಹಬ್ಬವಾಗಿದೆ. ಕೃಷಿ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸಲು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸುವುದು ಈ ಹಬ್ಬದ ವಿಶೇಷವಾಗಿದೆ.ಮಳೆ ಇಲ್ಲದೇ ನಿತ್ಯವೂ ರೈತರು ಮುಗಿಲು ನೋಡುವಂತಹ ಪರಸ್ಥಿತಿಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಬಂದಿದೆ. ರೈತರು ತಮ್ಮ ಹೊಲದಲ್ಲಿನ ಎರೆಮಣ್ಣಿನಿಂದ ಎತ್ತುಗಳ ಮೂರ್ತಿಗಳನ್ನು ಮಾಡಿ, ಅಮಾವಾಸ್ಯೆಯ ದಿನ ಪೂಜಿಸಿ ನಂತರ ಮನೆಯ ಮಾಳಿಗೆಯ ಮೇಲೆ ಇಡುತ್ತಾರೆ.

ಮಳೆಯಿಂದ ಎತ್ತಿನ ಮೂರ್ತಿಗಳು ಎಷ್ಟು ಬೇಗ ಕರಗುತ್ತವೆಯೋ ಅಷ್ಟು ಸಮೃದ್ಧಿ ಹಾಗೂ ವರ್ಷವಿಡೀ ಉತ್ತಮ ಮಳೆ ಆಗುತ್ತದೆ ಎಂಬುದು ರೈತರ ನಂಬಿಕೆಯಾಗಿದೆ. ಆದರೆ ಈ ವರ್ಷ ಸರಿಯಾಗಿ ಮಳೆ ಆಗಿಲ್ಲ. ಮಳೆಯ ಭರವಸೆ ರೈತರು ಕಳೆದುಕೊಳ್ಳುತ್ತಿದ್ದಾರೆ. ಮಣ್ಣೆತ್ತಿನ ಪೂಜೆಯ ನಂತರವಾದರೂ ಸಮೃದ್ಧವಾಗಿ ಮಳೆಯಾಗಲಿ ಎಂಬುದು ರೈತರ ಆಶಯವಾಗಿದೆ. ರೈತರ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಪೂಜಿಸುವ ಹಬ್ಬ ಇದಾಗಿದೆ.

ಮಣ್ಣಿಂದ ಎತ್ತಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ಮನೆಯಲ್ಲಿ ಇಟ್ಟು ಅಮವಾಸ್ಯೆಯಂದು ಪೂಜಿಸುವರು ಮರುದಿನ ಪಾಡ್ಯ ಕೂಡ ಪೂಜಿಸಿ ಹೊಲ ಹೊಂದಿದವರು ಅವುಗಳನ್ನು ನಾಗರ ಪಂಚಮಿಯವರೆಗೂ ದಿನನಿತ್ಯ ಪೂಜಿಸುತ್ತ ಕೆರೆಕೆಟ್ಟಂಬಲಿ ಅಂತ ಮಾಡಿ ಅಂಬಲಿ ಮಾಡಿಕೊಂಡು ಪಂಚಮಿಯ ನಂತರದ ದಿನ ತಮ್ಮ ಹೊಲಗಳಿಗೆ ತಗೆದುಕೊಂಡು ಹೋಗಿ ಇಡುವರು. ಅಂದರೆ ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊಂಡು ಭಕ್ತಿಯಿಂದ ಸ್ಮರಿಸುವ ದಿನ ಮಣ್ಣೆತ್ತಿನ ಅಮವಾಸೆಯಾಗಿದೆ.

ಮಣ್ಣೆತ್ತಿನ ಅಮವಾಸ್ಯೆಗೆ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ಜೀನಗಾರ ಮನೆತನದವರು ತಯಾರಿಸುತ್ತಾರೆ. ಪಟ್ಟಣದ ಜೀನಗಾರರ ಮನೆತನದ ಮಣ್ಣಿನ ಮೂರ್ತಿಗಳ ತಯಾರಕ ವೀರಾಂಜನೇಯ ತಯಾರಿಸಿದ ಜೋಡಿ ಎತ್ತುಗಳನ್ನು ರೈತರು ಖರೀದಿಸಿ ತರುತ್ತಾರೆ.

ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಮಣ್ಣಿನ ಎತ್ತುಗಳನ್ನು ಸಿಂಗರಿಸುತ್ತಾರೆ. ಸಿಂಗರಿಸಿದ ಜೋಡೆತ್ತುಗಳಿಗೆ ಆರತಿ ಎತ್ತಿ ಪೂಜಿಸುವ ಮೂಲಕ ಮಣ್ಣಿತ್ತಿನ ಅಮವಾಸೆಯನ್ನು ರೈತರು ಆಚರಿಸುವುದು ವಾಡಿಕೆಯಾಗಿದೆ.