ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ ಸೋಮವಾರ ಧರೆಗೆ ದೊಡ್ದವರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ಗ್ರಾಮ ದೇವತೆಯ ಕೊಂಡೋತ್ಸವವು ಭಾರಿ ಜನಸ್ತೋಮದೊಂದಿಗೆ ವಿಜೃಂಭಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ನಡೆಯಿತು.ಭಾನುವಾರ ಮುಸಂಜೆಯಲ್ಲಿ ಕುರುಬನಕಟ್ಟೆ ಕಂಡಾಯಗಳಿಗೆ ಗ್ರಾಮಸ್ಥರು ಪೂಜೆ ಮಾಡಿ ಬರಮಾಡಿಕೊಂಡರು. ರಾತ್ರಿ 10 ರ ಸಮಯದಲ್ಲಿ ಮರಗಳಿಂದ ಜೋಡಿಸಿದ ಕೊಂಡದ ಸೌದೆಗೆ ಕಂಡಾಯ ಹೊತ್ತವರು ಕಿಚ್ಚಿನ್ನು ಇಟ್ಟರು. ಮಂಗಳವಾದ್ಯಗಳೊಂದಿಗೆ ಕಂಡಾಯ ಮೂರ್ತಿಗಳು ಹಾಗೂ ಸತ್ತಿಗೆಗಳು ಕೊಂಡದ ಬೆಂಕಿಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ಯುವಕರು ಗ್ರಾಮೀಣರ ಕುಣಿತದಲ್ಲಿ ತಲ್ಲೀನರಾದರು. ಎತ್ತ ನೋಡಿದರೂ ಗ್ರಾಮವು ದೀಪಾಲಂಕದಿಂದ ಕೂಡಿತ್ತು. ರಸ್ತೆಯ ಸಂಚಾರಿಗಳನ್ನು ತನ್ನತ್ತ ಸೆಳೆಯಿತು ಹಾಗೂ ಗ್ರಾಮವು ಮಾವಿನ ತೋರಣಗಳಿಂದ ಮದುವಣಗಿತ್ತಿಯಂತೆ ಕಂಗೊಳಿಸಿತು.ಸೋಮವಾರ ಮುಂಜಾನೆ ಯಳಂದೂರು ಪಟ್ಟಣದ ಆಸ್ಪತ್ರೆಯ ಹಿಂಭಾಗದಲ್ಲಿರುವ ತೋಟಕ್ಕೆ ತೆರಳಿ ಅಲ್ಲಿನ ಬಾವಿಯಿಂದ ನೀರನ್ನು ತೆಗೆದು ಕಂಡಾಯಗಳನ್ನು ಹಾಗೂ ಛತ್ರಿ, ಚಾಮರ ಹಾಗೂ ಸತ್ತಿಗೆಗಳನ್ನು ತೊಳೆದು ಹೂ, ಹೊಂಬಾಳೆಗಳಿಂದ ಅಲಂಕರಿಸಿದ್ದರು. ಹೂ ಹೊಂಬಾಳೆಗಳಿಂದ ಅಲಂಕೃತಗೊಂಡ ಕಂಡಾಯ ಮೂರ್ತಿಗಳು, ಸತ್ತಿಗೆ , ಛತ್ರಿ ಚಾಮರಗಳು ಹಾಗೂ ನೀಲಗಾರರ ಜಾಗಟೆ ಸದ್ದು ಹಾಗೂ ಮಂಗಳವಾದ್ಯಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಉತ್ಸವದೊಂದಿಗೆ ತೆರಳಿದರು. ರಸ್ತೆಯ ಉದ್ದಕ್ಕೂ ಹೆಂಗಳೆಯರು ರಂಗೋಲಿ ಚಿತ್ತಾರ ಮೂಡಿಸಿದ್ದರು. ಭಕ್ತರು ರಸ್ತೆಯ ಉದ್ದಕ್ಕೂ ಕಾಯಿಗಳನ್ನು ಹೊಡೆದು ಹರಕೆ ತೀರಿಸಿದರು. ಕಂಡಾಯ ಮೂರ್ತಿಗಳು ಹಾಗೂ ಸತ್ತಿಗಳು ಕೊಂಡದ ಬಳಿ ಬರುವಾಗ ಭಕ್ತಾಧಿಗಳು ಜೈಕಾರ ಕೂಗಿ ಕೊಂಡವನ್ನು ಹಾಯುವುದನ್ನು ನೋಡಲು ಭಕ್ತರು ಸಮೀಪದ ಮನೆಗಳ ಮೇಲೆ ಏರಿ ದೃಶ್ಯವನ್ನು ಕಣ್ತುಂಬಿಕೊಂಡರು. ಭಾರಿ ಪೋಲೀಸ್ ಭದ್ರತೆಯ ನಡುವೆ ಸೋಮವಾರ ಬೆಳಗ್ಗೆ 8.45 ರ ಸಮಯದಲ್ಲಿ ಭಾರಿ ವಿಜೃಂಭಣೆಯೊಂದಿಗೆ ಮಂಟೇಸ್ವಾಮಿ, ಸಿದ್ದಪ್ಪಾಜಿ, ದೊಡ್ಡತಾಯಮ್ಮ, ಹಾಗೂ ಗ್ರಾಮದೇವತೆಯ ಕೊಂಡೋತ್ಸವವು ನಡೆಯಿತು.ಭಕ್ತರು ಕೊಂಡವನ್ನು ಹಾಯುವುದನ್ನ ನೋಡಿ ಪುಳಕಿತರಾದರು. ನಂತರ ಕೊಂಡದ ಮಾಳಕ್ಕೆ ತೆರಳಿ ಧೂಪಗಳನ್ನು ಹಾಕುವುದರ ಮೂಲಕ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮತ್ತು ಮುಖಂಡರು, ಹಾಗೂ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ರಾಜಕೀಯ ಗಣ್ಯರು ಹಾಗೂ ವಿವಿಧ ಕೋಮಿನ ಯಜಮಾನರು ಮುಖಂಡರು ಹಾಗೂ ಪೋಲೀಸ್ ಸಿಬ್ಬಂದಿಗಳು , ಭಕ್ತಾದಿಗಳು ಹಾಜರಿದ್ದರು.