ಚಿಕ್ಕಮಗಳೂರಲ್ಲಿ ಮತ್ತೆ ‘ಶೋಭಾ ಗೋ ಬ್ಯಾಕ್‌’

| Published : Feb 27 2024, 01:36 AM IST / Updated: Feb 27 2024, 02:08 PM IST

ಚಿಕ್ಕಮಗಳೂರಲ್ಲಿ ಮತ್ತೆ ‘ಶೋಭಾ ಗೋ ಬ್ಯಾಕ್‌’
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನಲ್ಲಿ ಶೋಭಾ ಗೋ ಬ್ಯಾಕ್‌ ಎಂದು ಬಿಜೆಪಿ ಸಂಸದೆ ವಿರುದ್ಧ ಅಭಿಯಾನ ಶುರುವಾಗಿದೆ. ಆಗ ಸಿ.ಟಿ.ರವಿ ಪರ ಶುರುವಾಗಿದ್ದ ಅಭಿಯಾನ ಈಗ ಜೀವರಾಜ್‌ ಪರ ತಿರುಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೇಂದ್ರ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರಿನಲ್ಲಿ ಬಿಜೆಪಿಗರಿಂದಲೇ ಗೋ ಬ್ಯಾಕ್ ಚಳವಳಿ ಮುಂದುವರಿದಿದ್ದು, ಇದೀಗ ‘ಶೋಭಾ ಸಾಕು, ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಅಭ್ಯರ್ಥಿಯಾಗಬೇಕು’ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ.

ಈ ಕುರಿತು ಸೋಮವಾರ ಸುದ್ದಿಗಾರರಿಗೆ ಮಾತನಾಡಿದ ಶೋಭಾ, ಕಳೆದ ಬಾರಿ ಗೋ ಬ್ಯಾಕ್‌ ಶೋಭಾ ಚಳವಳಿ ಮಾಡಿದವರೇ ಈ ಬಾರಿಯೂ ಮಾಡುತ್ತಿದ್ದಾರೆ. ಈ ಕೆಲಸವನ್ನು ದುಡ್ಡಿನ ಮದದಿಂದ ಮಾಡಿಸುತ್ತಿದ್ದಾರೆ. 

ಯಾರೋ ಷಡ್ಯಂತ್ರ ಮಾಡಿದರೆ ಅದಕ್ಕೆ ನಾನು ಉತ್ತರ ಕೊಡುವುದಿಲ್ಲ, ಹಿರಿಯರು ಮತ್ತು ಹೈಕಮಾಂಡ್‌ನವರು ಕೊಡುತ್ತಾರೆ ಎಂದರು.ನನ್ನ ವಿರುದ್ಧ ಪತ್ರ ಯಾರು ಬರೆದರು, ಯಾವ ಹ್ಯಾಂಡ್‌ ರೈಟಿಂಗ್‌ನಲ್ಲಿ ಬರೆದರು, ಯಾರು ಪೋಸ್ಟ್ ಮಾಡಿದರು, ಎಷ್ಟು ಪೋಸ್ಟ್ ಮಾಡಿದರು, ಈ ಎಲ್ಲ ವರದಿಯನ್ನು ಕೇಂದ್ರ ತರಿಸಿಕೊಂಡಿದೆ.

ಯಾವುದೇ ಲೋಕಸಭೆ ಚುನಾವಣೆಯಲ್ಲಿ ಮಂತ್ರಿ ವಿರುದ್ಧ ಚಳವಳಿ ನಡೆದಾಗ ಸಹಜವಾಗಿಯೇ ಕೇಂದ್ರ ವರದಿ ತರಿಸಿಕೊಳ್ಳಲಿದೆ ಎಂದು ಹೇಳಿದರು.

ಬಿಜೆಪಿಯಿಂದಲೇ ಚಳವಳಿ: ಕೆಲ ದಿನಗಳ ಹಿಂದೆ ಮಾಜಿ ಸಚಿವ ಸಿ.ಟಿ.ರವಿ ಅವರ ಹೆಸರು ಮುಂದಿಟ್ಟುಕೊಂಡು ಚಳವಳಿ ನಡೆಸಿದ್ದ ಬಿಜೆಪಿಗರು, ಇದೀಗ ಶೋಭಾ ಸಾಕು ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಬೇಕು ಎನ್ನುವ ಹೊಸ ದಾಳ ಪ್ರಯೋಗ ಮಾಡಿದ್ದಾರೆ. 

ನಾವು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರಕ್ಕೂ ಬಾರದೆ ಜಿಲ್ಲೆಯ 5ಕ್ಕೆ 5 ಕ್ಷೇತ್ರ ಸೋತಾಗ ಕನಿಷ್ಟ ಸೌಜನ್ಯಕ್ಕಾದರೂ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಲು ಬಾರದ ಶೋಭಾ ಕರಂದ್ಲಾಜೆಯವರಿಗೆ ಈ ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಟಿಕೆಟ್‌ ನೀಡಬಾರದು ಎಂಬುದಷ್ಟೆ ನಮ್ಮ ಆಗ್ರಹ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ.

ಜೀವರಾಜ್‌ ಸ್ಪಷ್ಟನೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನನಗೆ ಟಿಕೆಟ್‌ ಕೊಡಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರೀತಿಗೆ ಹಾಕುತ್ತಿದ್ದಾರೆ ಅಷ್ಟೆ. ಈ ರೀತಿ ಇನ್ನು ಮುಂದೆ ಮಾಡಬೇಡಿ ಎಂದು ಡಿ.ಎನ್‌.ಜೀವರಾಜ್‌ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.