ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಕನ್ನಡ, ಆಂಗ್ಲ ಮತ್ತು ಉರ್ದು ಮಾಧ್ಯಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಪ್ರಾಯೋಜಕತ್ವದಲ್ಲಿ ಮುದ್ರಿಸಲಾಗಿರುವ ಮಾರ್ಕ್ಸ್ ಸ್ಕೋರರ್ ಪುಸ್ತಕ ಬಿಡುಗಡೆಗೊಳಿಸಿ, ತಾಲೂಕಿನ ಎಲ್ಲ 74 ಪ್ರೌಢಶಾಲೆಗಳಿಗೆ ಹಸ್ತಾಂತರಿಸಲಾಯಿತು.
ಹಾನಗಲ್ಲ: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಕನ್ನಡ, ಆಂಗ್ಲ ಮತ್ತು ಉರ್ದು ಮಾಧ್ಯಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಪ್ರಾಯೋಜಕತ್ವದಲ್ಲಿ ಮುದ್ರಿಸಲಾಗಿರುವ ಮಾರ್ಕ್ಸ್ ಸ್ಕೋರರ್ ಪುಸ್ತಕ ಬಿಡುಗಡೆಗೊಳಿಸಿ, ತಾಲೂಕಿನ ಎಲ್ಲ 74 ಪ್ರೌಢಶಾಲೆಗಳಿಗೆ ಹಸ್ತಾಂತರಿಸಲಾಯಿತು.
ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಮಾನೆ, ಕಳೆದ ಎರಡು, ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸಾಕಷ್ಟು ಪ್ರಯತ್ನ ನಡೆಸಿ, ಫಲ ಕಾಣಲಾಗಿದೆ. ಜಿಲ್ಲೆಯಲ್ಲಿ 7 ನೇ ಸ್ಥಾನದಲ್ಲಿದ್ದ ತಾಲೂಕಿನ ಫಲಿತಾಂಶ 2023-24 ನೇ ಸಾಲಿನಲ್ಲಿ 4ನೇ ಸ್ಥಾನಕ್ಕೆ, 2024-25ನೇ ಸಾಲಿನಲ್ಲಿ 3ನೇ ಸ್ಥಾನಕ್ಕೆ ಏರಿದೆ. ಈ ಬಾರಿ ನಂ. 1ನೇ ಸ್ಥಾನದ ಗುರಿ ಬೆನ್ನಟ್ಟಲಾಗಿದೆ. ಕಳೆದ 2 ವರ್ಷಗಳಿಂದ ತಾಲೂಕಿನ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಸ್ಕೋರರ್ ಪುಸ್ತಕ ವಿತರಿಸಲಾಗಿತ್ತು. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾಗಿರುವ ಪುಸ್ತಕವನ್ನು ಮೂರೂ ಮಾಧ್ಯಮಗಳಲ್ಲಿ ವಿಷಯ ಪರಿಣಿತರಿಂದ ಸಿದ್ಧಪಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಈ ಪುಸ್ತಕ ನೆರವಾಗಲಿದೆ. ಹಳ್ಳಿ, ಪಟ್ಟಣ ಎನ್ನದೇ ಎಲ್ಲ ಮಕ್ಕಳಿಗೂ ಸಹ ಶೈಕ್ಷಣಿಕ ಸೌಲಭ್ಯಗಳು ದೊರಕಬೇಕು. ಈ ನಿಟ್ಟಿನಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ, ವಸತಿ ಶಾಲೆ ಹೀಗೆ ತಾಲೂಕಿನ ಎಲ್ಲ ಪ್ರೌಢಶಾಲೆಗಳ 3582 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಸ್ಕೋರರ್ ಪುಸ್ತಕ ವಿತರಿಸಲಾಗುತ್ತಿದೆ ಎಂದು ವಿವರಿಸಿದರು. ನಮ್ಮ ತಾಲೂಕಿನ ವಿದ್ಯಾರ್ಥಿಗಳು, ಯುವಕ, ಯುವತಿಯರು ಜಾಗತಿಕ ಸ್ಪರ್ಧೆಗಳನ್ನು ಎದುರಿಸಲಿ ಎನ್ನುವ ಸದುದ್ದೇಶದಿಂದ ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಸಂಪನ್ಮೂಲ ವ್ಯಕ್ತಿಗಳಿಂದ ಐಎಎಸ್, ಕೆಎಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, 9ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಎಸ್ಸೆಸ್ಸೆಲ್ಸಿ ಕ್ರ್ಯಾಶ್ ಕೋರ್ಸ್, ಸ್ಪೋಕನ್ ಇಂಗ್ಲಿಷ್, 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ಹೀಗೆ ವರ್ಷವಿಡೀ ಹತ್ತು, ಹಲವು ತರಬೇತಿ ದೊರಕಿಸಲಾಗುತ್ತಿದೆ ಎಂದು ತಿಳಿಸಿದರು. ಬಿಇಒ ಆರ್.ವಿ.ಚಿನ್ನಿಕಟ್ಟಿ ಮಾತನಾಡಿ, ಉತ್ತಮ ಅಂಕ ಗಳಿಕೆಯ ಮೂಲಕ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಗಿಟ್ಟಿಸಲು ಸಹಕಾರಿಯಾಗುವಂಥ ಉತ್ಕೃಷ್ಟ ಗುಣಮಟ್ಟದ ಮಾರ್ಕ್ಸ್ ಸ್ಕೋರರ್ ಪುಸ್ತಕವನ್ನು ಶಾಸಕ ಶ್ರೀನಿವಾಸ ಮಾನೆ ಅವರು ವಿತರಿಸುತ್ತಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಫಲಿತಾಂಶ ಸುಧಾರಣೆಗೆ ಸಾಕಷ್ಟು ಯೋಜನೆ, ಕಾರ್ಯಕ್ರಮ ರೂಪಿಸಲಾದೆ. ಪ್ರತಿಯೊಂದು ಶಾಲೆಗಳು ಸಹ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು. ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಪೂರಕ ವಾತಾವರಣ ಸೃಷ್ಟಿಗೆ ಗಮನ ನೀಡಲಾಗಿದೆ. ಒಂದಲ್ಲ, ಒಂದು ತರಬೇತಿ, ಮಾರ್ಗದರ್ಶನ ಶಿಬಿರಗಳ ಮೂಲಕ ಭವಿಷ್ಯದ ಸ್ಪರ್ಧೆಗೆ ನಮ್ಮ ತಾಲೂಕಿನ ಪ್ರತಿಭೆಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಎಸ್ಸೆಸ್ಸೆಲ್ಸಿ ಸಮನ್ವಾಧಿಕಾರಿ ಉಮೇಶ ಸೇರಿದಂತೆ ಹಲವರು ಇದ್ದರು.