- ಪತಿಯ ಅನೈತಿಕ ಸಂಬಂಧದ ಸಾಕ್ಷ್ಯಗಳ ಪೆನ್ ಡ್ರೈವ್‌ ತಮ್ಮನ ಬ್ಯಾಗ್‌ನಲ್ಲಿ ಹಾಕಿದ್ದ ಮೃತ ಕಾವ್ಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯನ್ನು ಗಂಡನೇ ಕೊಲೆ ಮಾಡಿದ್ದಾನೆ ಎಂಬುದಾಗಿ ಮೃತಳ ಹೆತ್ತವರು ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.

ನಗರದ ದೇವರಾಜ ಅರಸು ಬಡಾವಣೆಯ ಕ್ವಾರ್ಟಸ್ ನ ವಾಸಿ ಕಾವ್ಯಾ (27 ‍ವರ್ಷ) ಮೃತ ಮಹಿಳೆ. ದಾವಣಗೆರೆ ತಾ. ಮಂಡ್ಲೂರು ಗ್ರಾಮದ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಶಿಕ್ಷಣ ಪಡೆದಿದ್ದ ಕಾವ್ಯ ಹಾಗೂ ಚನ್ನಗಿರಿ ತಾ. ಹೊದಿಗೆರೆ ಗ್ರಾಮ ಮೂಲದ ಪತಿ ಮನು ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. 2 ವರ್ಷದ ಹಿಂದಷ್ಟೇ ಈ ಜೋಡಿ ಮದುವೆಯಾಗಿತ್ತು.

ಕಾವ್ಯಗೆ ಮನು ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಅನ್ಯ ಮಹಿಳೆಯೊಬ್ಬಳ ಜೊತೆ ಆತನಿಗೆ ಅನೈತಿಕ ಸಂಬಂಧವೂ ಇತ್ತು. ಆತನ ಅನೈತಿಕ ಸಂಬಂಧದ ಕುರಿತಂತೆ ಕಾವ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಳು ಎನ್ನಲಾಗಿದೆ. ಇಲಾಖೆ ವಸತಿ ಗೃಹಗಳ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಕಾವ್ಯ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಕೆಯ ಪತಿ ಮನುಗೆ ಪೊಲೀಸರು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಮನು ಹೊಂದಿದ್ದ ಅಕ್ರಮ ಸಂಬಂಧದ ವಿಚಾರ ಕಾವ್ಯ ಗಮನಕ್ಕೆ ಬಂದಿತ್ತು. ಆತನ ಅಕ್ರಮ ಸಂಬಂಧದ ದಾಖಲೆ ಸಂಗ್ರಹಿಸಿದ್ದ ಕಾವ್ಯ ಈಗ ಸಾವನ್ನಪ್ಪಿದ್ದಾಳೆ. ವರದಕ್ಷಿಣೆ ಕಿರುಕುಳ ನೀಡಿ, ಕಾವ್ಯಗೆ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಕಾವ್ಯ ತನ್ನ ತಮ್ಮನಿಗೆ ವಿದ್ಯಾಭ್ಯಾಸ ಕೊಡಿಸಿ, ಸರ್ಕಾರಿ ನೌಕರಿ ಸಿಗಲು ಕಾರಣಳಾಗಿದ್ದರು. ಒಳ್ಳೆಯ ಮನೆ, ಸರ್ಕಾರಿ ನೌಕರಿಯ ಮನುಗೆ ಆಸೆಯಿಂದ ಪಾಲಕರು 22 ತಿಂಗಳ ಹಿಂದೆ ಮದುವೆ ಮಾಡಿದ್ದರು.


ಪೋಸ್ಟ್ ಮ್ಯಾನ್ ಮನು ಇಲ್ಲಿನ ದೇವರಾಜ ಅರಸು ಬಡಾವಣೆಯ ಅಂಚೆ ಇಲಾಖೆ ವಸತಿ ಗೃಹದಲ್ಲಿ ಪತ್ನಿ ಕಾವ್ಯ ಜೊತೆ ವಾಸವಿದ್ದ. ಶುಕ್ರವಾರ ರಾತ್ರಿ ಕಾವ್ಯ ಪಾಲಕರಿಗೆ ಕರೆ ಮಾಡಿದ್ದ ಮನು ಕಾವ್ಯ ಮಲಗಿದ್ದು, ಮಾತನಾಡುತ್ತಿಲ್ಲವೆಂದು ಹೇಳಿದ್ದನಂತೆ. ಕಾವ್ಯ ಹೆತ್ತವರು ಬರುವಷ್ಟರಲ್ಲೇ ಆಕೆ ಸಾವನ್ನಪ್ಪಿದ್ದಳು. ತಮ್ಮ ಮಗಳನ್ನು ಮನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ಮೃತ ದೇಹದ ಮೇಲೆ ಹಲ್ಲೆ ಗುರುತು, ಕಲೆಗಳು ಇದ್ದವು ಎಂಬುದಾಗಿ ಮನೆಗೆ ಭೇಟಿ ನೀಡಿದ್ದ ಪಾಲಕರು ಆರೋಪಿಸಿದ್ದಾರೆ.

- - -

* ಮೃತಳ ತಾಯಿ ಶಶಿಕಲಾ ಹೇಳಿಕೆ ಮನು ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿದ್ದರಿಂದ ಕಾವ್ಯ ಜೊತೆಗೆ ಅನೇಕ ಗಲಾಟೆ ಮಾಡಿದ್ದ. ಅಷ್ಟೇ ಅಲ್ಲ, ಮನು ಅಕ್ರಮ ಸಂಬಂಧದ ಸಾಕ್ಷ್ಯ ಪೆನ್‌ ಡ್ರೈವ್‌ನಲ್ಲಿ ಸಂಗ್ರಹಿಸಿ, ತವರು ಮನೆಗೆ ಬಂದಿದ್ದ ವೇಳೆ ತಮ್ಮನ ಬ್ಯಾಗ್‌ನಲ್ಲಿಟ್ಟಿದ್ದಳು. ಮದುವೆ ವೇಳೆ ಸಾಲ ಮಾಡಿ, 70 ಗ್ರಾಂ ಚಿನ್ನಾಭರಣ, ₹2.5 ಲಕ್ಷ ವರದಕ್ಷಿಣೆ ನೀಡಿದ್ದರೂ ಪದೇಪದೇ ಹಣ ನೀಡುವಂತೆ ಮನು ಕಾವ್ಯಗೆ ಪೀಡಿಸುತ್ತಿದ್ದನಂತೆ. ಆಗ ಆಕೆಯನ್ನು ಕೊಂದಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ಗೊತ್ತಿದ್ರೂ ಆತನ ತಾಯಿ ಮದುವೆ ಮಾಡಿಸಿದ್ದಾರೆ. ಮನು ತಾಯಿಯೂ ಕಾವ್ಯಗೆ ಪೀಡಿಸುತ್ತಿದ್ದರು. ಮಗಳ ಸಾವಿಗೆ ಕಾರಣವಾದ ಎಲ್ಲರ ವಿರುದ್ಧವೂ ಕಾನೂನು ಕ್ರಮವಾಗಬೇಕು ಎಂದು ಮೃತಳ ತಾಯಿ ಶಶಿಕಲಾ ಒತ್ತಾಯಿಸಿದ್ದಾರೆ.

- - -

(ಕೋಟ್‌) ಕಾವ್ಯ ಅನುಮಾನಾಸ್ಪದ ಸಾವಿನ ಬಗ್ಗೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಆರೋಪಿ ಮನುಗೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯಾಲಯಕ್ಕೆ ನಾವು ಪೆನ್ ಡ್ರೈವ್ ಸಾಕ್ಷ್ಯ ನೀಡುತ್ತೇವೆ. ಪೊಲೀಸರು ಸಮರ್ಪಕವಾಗಿ ತನಿಖೆ ಕೈಗೊಳ್ಳದಿದ್ದರೆ, ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸುವ ಜೊತೆಗೆ ಕಾನೂನು ಹೋರಾಟವನ್ನೂ ನಡೆಸಬೇಕಾಗುತ್ತದೆ.

- ರೋಜಾ, ಮೃತ ಕಾವ್ಯಾ ಸಂಬಂಧಿ.

- - -