ಸಾರಾಂಶ
ಉಡುಪಿ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 2023 ರಿಂದ ಪ್ರಸ್ತುತ ಅಕ್ಟೋಬರ್ ವರೆಗೆ 16,377 ಮಂದಿ ಫಲಾನುಭವಿಗಳಿಗೆ 7.77 ಕೋಟಿ ರು. ಪಾವತಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ತಮ್ಮ ಕಚೇರಿಯಲ್ಲಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಈ ಯೋಜನೆಯಲ್ಲಿ, ಸರ್ಕಾರದಿಂದ ಸೌಲಭ್ಯ ಸಿಗುವ ಸರ್ಕಾರಿ ನೌಕರರು ಮತ್ತು ಆದಾಯ ಪರಿಮಿತಿ ಹೆಚ್ಚಿರುವ ಕುಟುಂಬಗಳನ್ನು ಹೊರತುಪಡಿಸಿ, ಉಳಿದೆಲ್ಲ ಬಹುತೇಕ ಮಹಿಳೆಯರಿಗೆ ಮೊದಲನೇ ಹೆರಿಗೆಗೆ 5,000 ರು.ಸ ಎರಡನೇ ಹೆಣ್ಣು ಮಗುವಿನ ಹೆರಿಗೆಯಲ್ಲಿ 6,000 ರು. ಮೊತ್ತ ನೀಡಲಾಗಿದೆ ಎಂದರು.ಜಿಲ್ಲೆಯಲ್ಲಿ 11,706 ತಾಯಂದಿರು ಮೊದಲನೆ ಹೆರಿಗೆ ನೊಂದಣಿ ಮಾಡಿದ್ದು, ಅವರಿಗೆ 3,18,51,000 ರು. ಮತ್ತು 4,671 ತಾಯಂದಿರು ಎರಡನೇ ಹೆಣ್ಣು ಮಗುವಿನ ಹೆರಿಗೆ ನೊಂದಾವಣೆ ಮಾಡಿದ್ದು, ಅವರಿಗೆ 2,80,26,000 ರು. ಪಾವತಿ ಮಾಡಲಾಗಿದೆ ಎಂದರು.ಮಾತೃವಂದನಾ ಯೋಜನೆ ಸಾಮಾನ್ಯ ಜನರಿಗೆ ಅದರಲ್ಲೂ ಮಹಿಳೆಯರಿಗೆ ಅತ್ಯಗತ್ಯವಾಗಿರುವ ಯೋಜನೆ, ಕೇಂದ್ರ ಸರ್ಕಾರದ ಆಶಯ ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದವರು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.ಅಂಗನವಾಡಿಯ ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸುವಂತೆ ಸಲಹೆ ನೀಡಿದ ಕೋಟ, ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟು ರಾಜ್ಯ ಸರ್ಕಾರ ಶೇ 40 ವೆಚ್ಚವನ್ನು ಭರಿಸುತ್ತಿವೆ, ಈ ಜಂಟಿ ಯೋಜನೆಯಲ್ಲಿ ಗುಣಮಟ್ಟದ ಆಹಾರದ ಕಡೆ ಹೆಚ್ಚು ಗಮನಹರಿಸುವುದು ಅಗತ್ಯ ಎಂದರು.ಸಭೆಯಲ್ಲಿ ಮಾಹಿತಿ ಒದಗಿಸಿದ ಜಿಲ್ಲಾಮಟ್ಟದ ಅಧಿಕಾರಿ ಶಾಮಲಾ ಅವರು, ಜಿಲ್ಲೆಯಲ್ಲಿ ೧೧೨೨ ಅಂಗನವಾಡಿಗಳಿದ್ದು, ಅವುಗಳಲ್ಲಿ ೪೭,೭೮೪ ಮಕ್ಕಳು ಕಲಿಯುತ್ತಿದ್ದಾರೆ ಎಂದರು. ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮನಿ, ಉಡುಪಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ ನಾಯ್ಕ, ಮತ್ತು ಕಾರ್ಕಳದ ಯೋಜನಾಧಿಕಾರಿ ಶ್ರೀಲತಾ, ಕುಂದಾಪುರದ ಹಿರಿಯ ಮೇಲ್ವಿಚಾರಕಿ ಸುಜಯಾ, ಜಿಲ್ಲಾ ಮಿಷನ್ ಸಂಯೋಜಕಿ ಶಾರದಾ, ಮಾತೃವಂದನಾ ಜಿಲ್ಲಾ ಸಂಯೋಜಕ ಜೀವನ್ ಕುಮಾರ್ ಇದ್ದರು.