ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಶಿವ ನಾಮಸ್ಮರಣೆಯಲ್ಲಿ ಮನದ ಅಂಧಕಾರ ಹೊಗಲಾಡಿಸುವ ಆಚರಣೆಯೆ ಶಿವರಾತ್ರಿ ಎಂದು ಚನ್ನಗಿರಿ ಹಿರೇಮಠದ ಡಾ.ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸಮೀಪದ ಮಾರಶೇಟ್ಟಿಹಳ್ಳಿಯ ಶನೇಶ್ವರ ಸ್ವಾಮಿ ಹಾಗೂ ಈಶ್ವರ ದೇವಾಲಯದ ಆವರಣ ಗ್ರಾಮಸ್ಥರ ಸಹಯೋಗದೊಂದಿಗೆ ಎರಡು ದಿನ ಹಮ್ಮಿಕೊಳ್ಳಲಾಗಿದ್ದ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿ ಮಾತನಾಡಿದರು.
ನಿತ್ಯದ ಜೀವನದಲ್ಲಿ ಜಪತಪಗಳನ್ನು ಅಳವಡಿಸಿಕೊಂಡರೆ ಅನುದಿನವು ಶಿವರಾತ್ರಿಯೆ ಆಗುತ್ತದೆ. ಹಿಂದೂಗಳು ಶಿವರಾತ್ರಿಯ ಆಚರಣೆ ಮಾಡುವ ಮೂಲಕ ಸಂಸಾರ ಭವ ಬಂಧನದಿಂದ ಹೊರ ಬರಬಹುದು. ಪ್ರತಿಯೊಬ್ಬರಲ್ಲೂ ಶಿವ ಚಿಂತನೆಗಳು ಮೈಗೂಡಬೇಕು. ಧರ್ಮ ರಕ್ಷಣೆಗೆ ಕಂಕಣ ಬದ್ದರಾಗಬೇಕು. ಜಾತಿ ಸಂಘರ್ಷಗಳಿಂದ ದೂರಾಗಿ ಮನುಜ ಮತ ಮೊದಲಾಗಬೇಕು. ಧರ್ಮಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿವೆ. ಆಡಂಭರಕ್ಕಾಗಿ ದಾರ್ಮಿಕ ಆಚರಣೆಗಳನ್ನು ನಡೆಸುವುದು ನಿಲ್ಲಬೇಕು. ಸಮಾಜ ಮುಖಿ ಕಾರ್ಯಗಳಿಗೆ ಕೈ ಜೋಡಿಸಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಯುವ ಸಮುದಾಯ ಧರ್ಮ ಚಿಂತನೆ ಮೌಲ್ಯಗಳಿಂದ ದೂರಾಗಿ ದುಶ್ಚಟಗಳಿಗೆ ಬಲಿಯಾಗಿತ್ತಿದ್ದಾರೆ ಎಂದರು.ಆಧುನಿಕತೆಯ ಭರಾಟೆಗೆ ಸಿಲುಕಿ ಹಳ್ಳಿಗಳಲ್ಲಿ ಸಹಪಂಕ್ತಿಯ ಜೀವನ ಕಾಣೆಯಾಗುತ್ತಿರುವುದು ಒಳ್ಳೆಯದಲ್ಲ. ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರವನ್ನು ಕೊಡುಗೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಜೀನದಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳದೆ ಧರ್ಮ ಮಾರ್ಗದಲ್ಲಿ ಗೌರವಯುತ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ವೃದ್ದಿಯಾಗಬೇಕಿದೆ. ಮೊದಲು ನಾವುಗಳು ಜಾಗೃತರಾದರೆ ನಮ್ಮ ಸಮಾಜ ಉಳಿಯುತ್ತದೆ. ಧರ್ಮ ಮಾರ್ಗದಲ್ಲಿ ನಡೆದರಿಗೆ ಜೀವನ ಕೊನೆಯ ದಿನಗಳಲ್ಲಿ ಶುಭ ದಿನಗಳು ಸಿಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಸಮಿತಿ ಅಧ್ಯಕ್ಷ ಗೌರವಾಧ್ಯಕ್ಷ ಎಲ್.ಮಂಜುನಾಥ್ ಮೋರೆ, ಎಂ.ಸಿ ಮೂರ್ತಪ್ಪ, ಬಸವರಾಜಪ್ಪ, ಮಾಹಂತೇಶರಾವ್ ಬಾಂಡ್ಲೆಕರ್, ಶಾಂತಕುಮಾರ್, ಚಂದ್ರೋಜಿರಾವ್, ಓಂಕಾರಮೂರ್ತಿ, ನಾಗೇಶ್ವರರಾವ್, ನವೀನ್, ಹಾಲಸ್ವಾಮಿ, ಕುಮಾರಪ್ಪ, ಮನೋಹರ, ಶಿವಪ್ಪ ಇತರರು ಇದ್ದರು.