ಚಾಮುಂಡಿ ಅಸಹಿಷ್ಣುತೆಯನ್ನು ನಾಶ ಮಾಡಲಿ : ಬಾನು ಮುಷ್ತಾಕ್‌

| N/A | Published : Sep 23 2025, 01:03 AM IST

ಸಾರಾಂಶ

ದಸರಾ ಮಾನವ ಕುಲಕ್ಕೆ ಶಾಂತಿ, ಸಹಾನುಭೂತಿ ಮತ್ತು ನ್ಯಾಯದ ದೀಪವನ್ನು ಬೆಳಗಿಸಲಿ. ಚಾಮುಂಡಿದೇವಿ ಅಸಹಿಷ್ಣುತೆಯನ್ನು ನಾಶ ಮಾಡಲಿ ಎಂದು ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಆಶಯ ವ್ಯಕ್ತಪಡಿಸಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

 ಮೈಸೂರು : ದಸರಾ ಮಾನವ ಕುಲಕ್ಕೆ ಶಾಂತಿ, ಸಹಾನುಭೂತಿ ಮತ್ತು ನ್ಯಾಯದ ದೀಪವನ್ನು ಬೆಳಗಿಸಲಿ. ಚಾಮುಂಡಿದೇವಿ ಅಸಹಿಷ್ಣುತೆಯನ್ನು ನಾಶ ಮಾಡಲಿ ಎಂದು ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಆಶಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಮುಷ್ತಾಕ್‌, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ದೇವಿಗೆ ನಮಿಸಿ, ಮಂಗಳಾರತಿ ಸ್ವೀಕರಿಸಿದರು. ನಂತರ, ಬೆಳಗ್ಗೆ 10.40ರ ಶುಭ ವೃಶ್ಚಿಕ ಲಗ್ನದಲ್ಲಿ ಹೊರಾವರಣದಲ್ಲಿ ಬೆಳ್ಳಿಯ ರಥದಲ್ಲಿ ಇರಿಸಲಾಗಿದ್ದ ದೇವಿಯ ಉತ್ಸವ ಮೂರ್ತಿ ಮುಂದೆ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡಿ, ವಿಧ್ಯುಕ್ತವಾಗಿ ಮೈಸೂರು ದಸರಾಕ್ಕೆ ಚಾಲನೆ ನೀಡಿದರು.

ಹಿಂದೆಂದೂ ಕಾಣದ ಪೊಲೀಸರ ಬಿಗಿ ಭದ್ರತೆ ನಡುವೆ ನಗರದ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೊಂಡಿತು. ಪ್ರೀತಿ ಹರಡುವುದೇ ಗುರಿ:

ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾನವ ಪ್ರೀತಿಯ ಸಂದೇಶ ನೀಡಿದ ಬಾನು ಮುಷ್ತಾಕ್‌, ಜಗತ್ತು ಇಂದು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಇಂದು ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿದೆ. ಹೀಗಾಗಿ ಈ ದಸರಾ ಹಬ್ಬ ಕೇವಲ ಮೈಸೂರು ನಗರಕ್ಕೆ, ನಮ್ಮ ನಾಡಿಗೆ, ದೇಶಕ್ಕೆ ಮಾತ್ರ ಸೀಮಿತವಾಗದೆ, ಇಡೀ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪವನ್ನು ಬೆಳೆಗಿಸಲೆಂದು ಹಾರೈಸುತ್ತೇನೆ. ಇಂದು ಬೆಳಗಿಸಿದ ದೀಪ ಈ ಸಂದೇಶದೊಂದಿಗೆ ಇಡೀ ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿರಲಿ. ತಾಯಿ ಚಾಮುಂಡಿಯ ಸತ್ಯ, ಧೈರ್ಯ ಹಾಗೂ ರಕ್ಷಕತ್ವದ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಗಳನ್ನು ನಾಶಪಡಿಸಲೆಂದು ಬಯಸುತ್ತೇನೆ ಎಂದರು.

ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ, ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ ಎಂದು ಅವರು ಕರೆ ನೀಡಿದರು.

ಮಹಾರಾಜ ಜಯಚಾಮರಾಜ ಒಡೆಯರು ಮುಸ್ಲಿಮರನ್ನು ನಂಬಿ, ಅವರನ್ನು ಅನುಮಾನಿಸದೆ, ಅಂಗರಕ್ಷಕರ ಪಡೆಯ ಸದಸ್ಯರಾಗಿ ನೇಮಿಸಿಕೊಂಡಿದ್ದರು. ಇದು ನಮಗೆ ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನವಾದ ವಿಷಯ ಎಂದು ಅವರು ಹೇಳಿದರು.

Read more Articles on