ಸಾರಾಂಶ
ಮೈಸೂರು : ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ಹಸಿರು ಕುಪ್ಪಸ, ಹಳದಿ ಸೀರೆ ಉಟ್ಟು, ತಲೆಗೆ ಮಲ್ಲಿಗೆ ದಂಡೆ ಮುಡಿದುಕೊಂಡು ಬಂದು ಚಾಮುಂಡಿದೇವಿಗೆ ನಮಿಸಿ, ಮಂಗಳಾರತಿ ಸ್ವೀಕರಿಸಿ, ಉದ್ಘಾಟನೆ ನೆರವೇರಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.
ದೇವಸ್ಥಾನದ ಒಳಗೆ ಬರುತ್ತಿದ್ದಂತೆ ಗಣೇಶ ಮೂರ್ತಿಗೆ ಕೈ ಮುಗಿದು ನಮಿಸಿದರು. ದೇವರ ಮುಂದೆ ಕೈ ಮುಗಿದು, ಹೂ ಪಡೆದು ನಮಸ್ಕರಿಸಿದರು. ಗರ್ಭಗುಡಿ ಎದುರು ಮೊದಲಿಗರಾಗಿ ನಿಂತು ದೇವಿಯ ದರ್ಶನ ಪಡೆದರು. ನಂತರ ಮಂಗಳಾರತಿ ಸ್ವೀಕರಿಸಿ ಗೌರವ ಸಲ್ಲಿಸಿದರು. ಚಾಮುಂಡೇಶ್ವರಿಯ ಪಾದ ಮುಟ್ಟಿ ನಮಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನ ಮಾಡಿದರು.
ದೇವಾಲಯದ ವತಿಯಿಂದ ಬಾನು ಮುಷ್ತಾಕ್ ಗೆ ಹಾರ ಹಾಕಿ, ಸೀರೆ ನೀಡಿ ಗೌರವಿಸಲಾಯಿತು. ಗರ್ಭಗುಡಿಯಲ್ಲಿ ಎಲ್ಲರಿಗೂ ಹೂವಿನ ಹಾರ ಹಾಕಿ ಗೌರವಿಸಲಾಯಿತು. ಆದರೆ, ಅರ್ಚಕರು ಯಾರಿಗೂ ಕುಂಕುಮ ನೀಡಲಿಲ್ಲ. ಬಾನು ಮುಷ್ತಾಕ್, ಸಿಎಂ ಸಿದ್ದರಾಮಯ್ಯ ಅವರಿಗಿಂತ ಮುಂಚಿತವಾಗಿ ಬಂದವರು ತಾವಾಗಿಯೇ ಕುಂಕುಮ ಹಚ್ಚಿಕೊಂಡರು.