ಜನಪ್ರತಿನಿಧಿಗಳಲ್ಲಿ ದೇವರು ಜನಸೇವೆ ಆಸಕ್ತಿ ಅನುಗ್ರಹಿಸಲಿ

| Published : Feb 12 2025, 12:36 AM IST

ಸಾರಾಂಶ

ತಾಲೂಕಿನ ಎಲ್ಲ ರಸ್ತೆಗಳು ತಗ್ಗು, ಗುಂಡಿಗಳು ತುಂಬಿ ಹಾಳಾಗಿವೆ. ಚುನಾವಣೆ ವೇಳೆ ಧಾರ್ಮಿಕ ವಿಚಾರದಲ್ಲಿ ಜನರನ್ನು ಬಳಸಿಕೊಂಡು ಮತ ಪಡೆದು ಆನಂತರ ಗಮನಹರಿಸದಿರುವುದು ವಿಷಾದನೀಯ. ದೇವರು ರಸ್ತೆ ದುರಸ್ತಿಪಡಿಸುವಂಥ ಒಳ್ಳೆಯ ಬುದ್ಧಿ ಜನಪ್ರತಿನಿಧಿಗಳಿಗೆ ನೀಡಲಿ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದ್ದಾರೆ.

- ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಹೇಳಿಕೆ । ಉಕ್ಕಡಗಾತ್ರಿಯಲ್ಲಿ ದೇವಸ್ಥಾನ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ಎಲ್ಲ ರಸ್ತೆಗಳು ತಗ್ಗು, ಗುಂಡಿಗಳು ತುಂಬಿ ಹಾಳಾಗಿವೆ. ಚುನಾವಣೆ ವೇಳೆ ಧಾರ್ಮಿಕ ವಿಚಾರದಲ್ಲಿ ಜನರನ್ನು ಬಳಸಿಕೊಂಡು ಮತ ಪಡೆದು ಆನಂತರ ಗಮನಹರಿಸದಿರುವುದು ವಿಷಾದನೀಯ. ದೇವರು ರಸ್ತೆ ದುರಸ್ತಿಪಡಿಸುವಂಥ ಒಳ್ಳೆಯ ಬುದ್ಧಿ ಜನಪ್ರತಿನಿಧಿಗಳಿಗೆ ನೀಡಲಿ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದರು.

ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ನಡೆದ ದೇವಸ್ಥಾನದ ಉದ್ಘಾಟನೆ, ಕೋಟಿಹಾಳ ಬೀರಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನೆ ವಾಸ್ತುಶಾಂತಿ ಹಾಗೂ ಸರಳ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜನರ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವೆ ಮಾಡಬೇಕಿದೆ. ಗ್ರಾಮೀಣ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು. ಹರಿಹರ ತಾಲೂಕಿನ ಕೊನೆ ಭಾಗದ ಜನರಿಗೆ ಭದ್ರಾ ನೀರು ಸಿಗುತ್ತಿಲ್ಲ. ಇದರಿಂದ ರೈತರು ಕಷ್ಟದಲ್ಲಿದ್ದಾರೆ. ಅವರಿಗೂ ನೀರು ಲಭ್ಯವಾಗಿ ರೈತರ ಬದುಕು ಚೆನ್ನಾಗಿರಬೇಕು. ಆ ದೇವರ ಆಶೀರ್ವಾದವೂ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಸರ್ಕಾರಿ ಶಾಲೆಗಳ ಉಳಿವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು. ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಮೂಲಕ ಶೈಕ್ಷಣಿಕ ಕ್ರಾಂತಿ ಆಗಬೇಕು. ಐಎಎಸ್, ಐಪಿಎಸ್, ಕೆಎಎಸ್ ಆಗಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕೆಲಸಗಳು ಆಗಬೇಕಿದೆ. ಗ್ರಾಮೀಣ ಪ್ರದೇಶಗಳ ಶಾಲೆಗಳು ಉದ್ಧಾರವಾಗಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿಯೂ ಜನರ ಆಶೀರ್ವಾದ, ಹಾರೈಕೆ ನನ್ನ ಮೇಲೆ ಇರಲಿ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಖುಷಿ ಕೊಟ್ಟಿದೆ. ದೇವಸ್ಥಾನಕ್ಕೆ ನನ್ನದೇ ಆದ ಕಿರುಕಾಣಿಕೆ ನೀಡಿದ್ದೇನೆ. ಇಂದು ತುಂಬಾ ಅಚ್ಚುಕಟ್ಟಾಗಿ, ನಯನಮನೋಹರ ಹಾಗೂ ಸುಂದರವಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಒಳಗಡೆ ಹೋದಾಗ ತುಂಬಾ ಸಂತೋಷ ಆಯಿತು. ನವ ವಧುವರರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಭವಿಷ್ಯ ಉಜ್ವಲವಾಗಿರಲಿ ಎಂದರು.

ರಟ್ಟಿಹಳ್ಳಿಯ ಕಬ್ಬಿಣ ಕಂತಿಮಠ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದಿಗುಡಿಯ ಬೃಹನ್ಮಠ 1108 ಜಗದ್ಗುರು ಶ್ರೀ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಇನ್ ಸೈಟ್ಸ್ ಐಎಎಸ್ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್, ಗ್ರಾಮದ ಮುಖಂಡರು ಮತ್ತಿತರರು ಹಾಜರಿದ್ದರು.

- - - -10ಎಚ್‍ಆರ್‍ಆರ್02.ಜೆಪಿಜಿ:

ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ದೇವಸ್ಥಾನ ಉದ್ಘಾಟನೆ, ಕೋಟಿಹಾಳ ಬೀರಲಿಂಗೇಶ್ವರ ಪ್ರಾಣ ಪ್ರತಿಷ್ಠಾಪನೆ ವಾಸ್ತುಶಾಂತಿ, ಸರಳ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.