ಸಿಲಬಸ್‌ ಗೊಂದಲದಲ್ಲಿ ಪಿಡಬ್ಲ್ಯುಡಿ ಸೇವಾನಿರತ ಅಭ್ಯರ್ಥಿಗಳು!

| Published : Feb 12 2025, 12:36 AM IST

ಸಾರಾಂಶ

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ ಉಳಿಕೆ ಮೂಲವೃಂದದ ಸಹಾಯಕ ಕಾರ್ಯಪಾಲಕ ಅಭಿಯಂತರ (ಗ್ರೇಡ್-1) ಗ್ರೂಪ್ ಎ ವೃಂದದ 30 ಹುದ್ದೆಗಳ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿರುವ ಕರ್ನಾಟಕ ಲೋಕಸೇವಾ ಆಯೋಗ, ಸೇವಾನಿರತ ಅಭ್ಯರ್ಥಿಗಳಿಗೆ ಎರಡೆರಡು ಸಿಲಬಸ್‌ಗಳ ನೀಡಿ, ಕಾಟಾಚಾರಕ್ಕೆ ಪರೀಕ್ಷೆ ನಡೆಸಲು ಸಜ್ಜಾಗಿದೆ. ಇದರ ವಿರುದ್ಧ ಈಗ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ.

- ಎಇಇ ಗ್ರೇಡ್-1 ವೃಂದದ 30 ಹುದ್ದೆಗೆ ನೇಮಕಾತಿ, ಇನ್‌ಸರ್ವೀಸ್‌ಗೆ 1 ಹುದ್ದೆ ಮೀಸಲು - 2 ಸಿಲಬಸ್‌ಗಳಲ್ಲಿ ಯಾವುದನ್ನು ಓದಬೇಕೆಂಬ ಇಕ್ಕಿಟ್ಟಿಗೆ ಸಿಲುಕಿರುವ ಸೇವಾನಿರತರು

- ಅತ್ತ ಹೈದ್ರಾಬಾದ್ ಕರ್ನಾಟಕಕ್ಕೂ ಮೀಸಲಿಲ್ಲ, ಇತ್ತ ಸೇವಾನಿರತರ ಪರದಾಟ ತಪ್ಪಿಲ್ಲ

- - - (ಕೆಪಿಎಸ್‌ಸಿ ಎಡವಟ್ಟು) - - - ನಾಗರಾಜ ಎಸ್. ಬಡದಾಳ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ ಉಳಿಕೆ ಮೂಲವೃಂದದ ಸಹಾಯಕ ಕಾರ್ಯಪಾಲಕ ಅಭಿಯಂತರ (ಗ್ರೇಡ್-1) ಗ್ರೂಪ್ ಎ ವೃಂದದ 30 ಹುದ್ದೆಗಳ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿರುವ ಕರ್ನಾಟಕ ಲೋಕಸೇವಾ ಆಯೋಗ, ಸೇವಾನಿರತ ಅಭ್ಯರ್ಥಿಗಳಿಗೆ ಎರಡೆರಡು ಸಿಲಬಸ್‌ಗಳ ನೀಡಿ, ಕಾಟಾಚಾರಕ್ಕೆ ಪರೀಕ್ಷೆ ನಡೆಸಲು ಸಜ್ಜಾಗಿದೆ. ಇದರ ವಿರುದ್ಧ ಈಗ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ.

ಆಯೋಗವು ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಸ್ಥಾನ ಮೀಸಲಿಟ್ಟಿಲ್ಲ. ಮೊದಲಿಗೆ ಸೇವಾನಿರತ ಅಭ್ಯರ್ಥಿಗಳಿಗೆ ಕಡೆಗಣಿಸಿದ್ದ ಆಯೋಗವು ನಂತರ ಎಚ್ಚೆತ್ತು, 1 ಹುದ್ದೆಯನ್ನು ಮಾತ್ರ ತೋರಿಕೆಗೆ ಮೀಸಲಿಟ್ಟು, ಆ ಹುದ್ದೆಗೆ ಸಾವಿರಾರು ಸೇವಾನಿರತ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಎಇಇ-1ರ ಗ್ರೂಪ್‌ ಎ ವೃಂದದ 30 ಹುದ್ದೆಗಳಿಗೆ ಆಯೋಗವು ಮೊದಲನೇ ನೋಟಿಫಿಕೇಷನ್‌ 18.9.2024ರಂದು ಹೊರಡಿಸಿ, ಅರ್ಜಿ ಸಲ್ಲಿಸಲು 4.11.2024ಕ್ಕೆ ಕಡೆಯ ದಿನವೆಂದು ಘೋಷಣೆ ಮಾಡಿತ್ತು. ಆದರೆ, ಸೇವಾನಿರತ ಅಭ್ಯರ್ಥಿಗಳಿಗೆ ಅ‍ವಕಾಶ ನೀಡದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಎಚ್ಚೆತ್ತ ಕೆಪಿಎಸ್‌ಸಿ ಇನ್ ಸರ್ವೀಸ್ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಿಟ್ಟು, 2ನೇ ತಿದ್ದುಪಡಿ ನೋಟಿಫಿಕೇಷನ್‌ನನ್ನು 21.1.2025ರಂದು ಹೊರಡಿಸಿತ್ತು. ಇಡೀ ರಾಜ್ಯದಲ್ಲಿ ಸೇವಾನಿರತ ಸಾವಿರಾರು ಅಭ್ಯರ್ಥಿಗಳು ತಮಗೆ ಮೀಸಲಾದ ಒಂದೇ ಒಂದು ಹುದ್ದೆಗೆ ಪೈಪೋಟಿ ನಡೆಸಬೇಕಾದ ಇಕ್ಕಿಟ್ಟಿಗೆ ಸಿಲುಕಿದ್ದಾರೆ.

2 ಸಿಲಬಸ್‌ ಗೊಂದಲ:

ಕೇವಲ 1 ಸೀಟ್ ಮೀಸಲಿಟ್ಟ ಬಗ್ಗೆ ಯಾರದ್ದೂ ಆಕ್ಷೇಪವಿಲ್ಲ. ಸಾಮಾನ್ಯವಾಗಿ ಇಲಾಖೆ ನೇಮಕಾತಿ ವೇಳೆ ಶೇ.5ರಷ್ಟು ಮೀಸಲಿಡುವುದು, ಆಯಾ ಸರ್ಕಾರವಿದ್ದಾಗ ಇದರಲ್ಲಿ ಒಂದಿಷ್ಟು ಏರಿಕೆ, ಇಳಿಕೆಯಾಗುತ್ತಿತ್ತು. ಆದರೆ, ಸೇವಾನಿರತ ಅಭ್ಯರ್ಥಿಗಳಿಗೆ 1 ಹುದ್ದೆ ಮೀಸಲಿಟ್ಟು, 3.2.2025 ರೊಳಗೆ ಅರ್ಜಿ ಸಲ್ಲಿಸಲು ಕೆಪಿಎಸ್‌ಸಿ ತಿದ್ದುಪಡಿ ನೋಟಿಫಿಕೇಷನ್ ಹೊರಡಿಸಿತ್ತು. ಅಲ್ಲದೇ, ಫೆ.1ರಂದು ಕೆಪಿಎಸ್‌ಸಿಯು ಎಇಇ-ಗ್ರೇಡ್‌ 1 ಹುದ್ದೆಗಳಿಗೆ ಫೆ.24ರಿಂದ 28 ರವರೆಗೆ 4 ದಿನ ಪರೀಕ್ಷೆ ನಿಗದಿಪಡಿಸಿದೆ. ಸೇವಾನಿರತರಲ್ಲದ ಅಭ್ಯರ್ಥಿಗಳಿಗೆ ಆಯೋಗ ಸಿಲಬಸ್ ನೀಡಿದೆ. ಆದರೆ, ಈಗ ಒಂದೇ ಹುದ್ದೆಗೆ ಸಾವಿರಾರು ಸೇವಾನಿರತ ಅಭ್ಯರ್ಥಿಗಳು ಪೈಪೋಟಿ ನಡೆಸಬೇಕಿರುವಾಗ ಎರಡನೇ ಸಿಲಬಸ್ ಬಿಟ್ಟಿರುವುದು ಮತ್ತಷ್ಟು ಗೊಂದಲ ಹುಟ್ಟುಹಾಕಿದೆ.

ಆಯೋಗವು ಬಿಟ್ಟ 2ನೇ ಸಿಲಬಸ್‌ನಲ್ಲಿ 25 ಸಬ್ಜೆಕ್ಟ್‌ಗಳನ್ನು ಸೇವಾನಿರತ ಅಭ್ಯರ್ಥಿಗಳು ಓದಿಕೊಳ್ಳಬೇಕಾಗಿದೆ. ಆದರೆ ಸೇವಾನಿರತರಲ್ಲದ ಅಭ್ಯರ್ಥಿಗಳಿಗೆ ಯಾವ್ಯಾವ ಪಠ್ಯಕ್ರಮವೆಂದು ಸ್ಪಷ್ಟವಾಗಿ ಮುಂಚೆಯೇ ತಿಳಿಸಿದೆ. ಮುಂಚೆಯೇ ನೋಟಿಫಿಕೇಷನ್‌ ನೀಡಿ, 9 ತಿಂಗಳ ಕಾಲ ಓದಿಕೊಳ್ಳಲು ಕಾಲಾವಕಾಶ ನೀಡಬೇಕಾಗಿತ್ತು. ಆದರೆ, ಫೆ.1ರಂದು ಎರಡೂ ಸಿಲಬಸ್‌ಗಳನ್ನು ಆಯೋಗ ಬಿಡುಗಡೆ ಮಾಡಿದೆ. ಯಾವ ಸಿಲಬಸ್ ಓದಬೇಕೆಂದು ಆಯೋಗದ ಕಚೇರಿಗೆ ಸೇವಾನಿರತ ಅಭ್ಯರ್ಥಿಗಳು ರಾಜ್ಯದ ವಿವಿಧೆಡೆಯಿಂದ ಕರೆ ಮಾಡಿ ಕೇಳಿದರೆ, ಎರಡನ್ನೂ ಓದಿಕೊಳ್ಳಿ ಎಂಬ ಉತ್ತರ ಸಿದ್ಧಉತ್ತರ ನೀಡಲಾಗುತ್ತಿದೆ.

ಸೇವೆಯಲ್ಲಿದ್ದವರಿಗೆ ಆಯೋಗ ಹೀಗೆ ಸಿಲಬಸ್‌ಗಳ ಗೊಂದಲ ಹುಟ್ಟುಹಾಕಿದರೆ ಏನರ್ಥ? ಎರಡೂ ಸಿಲಬಸ್ ಓದಿಕೊಳ್ಳಲು ಹೇಳಿರುವ ಕೆಪಿಎಸ್‌ಸಿ, ಫೆ.24ರಿಂದ 28ರವರೆಗೆ ಪರೀಕ್ಷೆ ನಡೆಸಲು ಹೊರಟಿದೆ. ಇದನ್ನು ಪ್ರಶ್ನಿಸಿ ಸೇವಾನಿರತ ಅಭ್ಯರ್ಥಿಗಳು ಇದೀಗ ಕೆಎಟಿ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ಪ್ರಮುಖ ಬೇಡಿಕೆಗಳೇನು?:

ಪರೀಕ್ಷಾ ದಿನಾಂಕ ಮುಂದೂಡಬೇಕು, ಸೇವಾನಿರತ ಅಭ್ಯರ್ಥಿಗಳು ಪರೀಕ್ಷೆಗೆ ಎರಡರಲ್ಲಿ ಯಾವ ಸಿಲಬಸ್ ಓದಬೇಕೆಂಬುದನ್ನು ಕೆಎಟಿ ಮೂಲಕ ಸ್ಪಷ್ಚಪಡಿಸಬೇಕು, ಪರೀಕ್ಷೆಗೆ ತಯಾರಿ ನಡೆಸಲು ಕಾಲಾವಕಾಶ ಕಲ್ಪಿಸಬೇಕು ಎಂಬುದು ರಾಜ್ಯದ ಸಾವಿರಾರು ಸೇವಾನಿರತ ಅಭ್ಯರ್ಥಿಗಳ ಒಕ್ಕೊರಲಿನ ಒತ್ತಾಯವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಈ ಸಂಬಂಧ ಕೆಎಟಿ ಮೊರೆಹೋಗಿರುವಾಗಿ ಒಂದೇ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಾಕಷ್ಟು ಸೇವಾನಿರತ ಅಭ್ಯರ್ಥಿಗಳು ಪ್ರತಿಕ್ರಿಯಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)