ಮೋದಿಯವರ ಕೈಗಳಲ್ಲಿ ಉತ್ತರಕನ್ನಡದ ಕಮಲವೂ ಇರಲಿ: ಚಕ್ರವರ್ತಿ ಸೂಲಿಬೆಲೆ

| Published : Apr 16 2024, 01:02 AM IST

ಮೋದಿಯವರ ಕೈಗಳಲ್ಲಿ ಉತ್ತರಕನ್ನಡದ ಕಮಲವೂ ಇರಲಿ: ಚಕ್ರವರ್ತಿ ಸೂಲಿಬೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಅತ್ಯಂತ ಶಕ್ತಿಯುತ ದೇಶವಾಗಿ ರೂಪುಗೊಳ್ಳುತ್ತಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ದೇಶ ಹೇಗಿರಬೇಕು ಎನ್ನುವ ಕನಸನ್ನು ಮೋದಿ ನನಸು ಮಾಡುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಸಿದ್ದಾಪುರ: ಮೋದಿಯವರನ್ನು ಪ್ರಧಾನಿಯಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅವರು ಪ್ರಧಾನಿಯಾಗುವುದು ಶತಃಸಿದ್ಧ. ಮೋದಿಯವರ ಕೈಗಳಲ್ಲಿ ಉತ್ತರಕನ್ನಡದ ಕಮಲವೂ ಇರಬೇಕು. ಇದು ಭಾರತದ ಅಳಿವು- ಉಳಿವಿನ ಪ್ರಶ್ನೆ ಎಂದು ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಪಟ್ಟಣದ ನೆಹರು ಮೈದಾನದಲ್ಲಿ ಸ್ಥಳೀಯ ನಮೋ ಬ್ರಿಗೇಡ್ ಸಹಯೋಗದಲ್ಲಿ ನಡೆದ ನಮೋ ಭಾರತ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಭಾರತ ಅತ್ಯಂತ ಶಕ್ತಿಯುತ ದೇಶವಾಗಿ ರೂಪುಗೊಳ್ಳುತ್ತಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ದೇಶ ಹೇಗಿರಬೇಕು ಎನ್ನುವ ಕನಸನ್ನು ಮೋದಿ ನನಸು ಮಾಡುತ್ತಿದ್ದಾರೆ. ಸಮಾಜವನ್ನು ಜಾಗೃತಗೊಳಿಸುವ, ದೇಶದ ನಾಗರಿಕರಲ್ಲಿ ಸ್ವಾವಲಂಬನೆ ಚಿಂತನೆ ಬೆಳೆಸುತ್ತಿರುವ ಅವರಿಗೆ ಮತ ಎನ್ನುವ ಶಕ್ತಿಯನ್ನು ನೀಡಬೇಕಿದೆ ಎಂದರು. ಹಿಂದೂ ಸಂಸ್ಕೃತಿಯ ಪುನರುತ್ಥಾನದ ಮಾರ್ಗದಲ್ಲಿ ಅಯೋಧ್ಯಾ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಸನ್ನಿಧಿಯ ಕಾರಿಡಾರ್, ಕೈಲಾಸ ಮಂದಿರ ಮಾತ್ರವಲ್ಲ, ಅಬುಧಾಬಿಯಲ್ಲಿ ಮಂದಿರ ನಿರ್ಮಾಣದ ಮೂಲಕ ಹಿಂದೂ ಸಂಸ್ಕೃತಿಯನ್ನು ಜಗತ್ತು ಒಪ್ಪಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಗಿದುಹೋಗಿದೆ ಎಂದುಕೊಂಡ ಸಂಸ್ಕೃತಿಗೆ ಜೀವ ತುಂಬುತ್ತಿದ್ದು, ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವ ರೀತಿಯಲ್ಲಿ ಅವರ ಕಾರ್ಯ ಸಾಗುತ್ತಿದೆ ಎಂದರು.

ನೋಟು ಅಮಾನ್ಯೀಕರಣದ ಮೂಲಕ ದೇಶದ ಆರ್ಥಿಕ ಶಕ್ತಿಗೆ ಹೊಸ ದಾರಿ ರೂಪಿಸಿದ, ಕೊರೋನಾ ಸಂಕಷ್ಟದಲ್ಲಿ ದೇಶದ ಬಹುಕೋಟಿ ಜನತೆಗೆ ಲಸಿಕೆ ನೀಡುವಲ್ಲಿ ಶ್ರಮಿಸಿದರು. ಅಲ್ಲದೇ ಜಗತ್ತಿನ ಹಲವು ದೇಶಗಳಿಗೆ ಲಸಿಕೆ ಪೂರೈಕೆ ಮಾಡಿದ ಮಹಾನ್ ಕಾರ್ಯ ಅವರದ್ದು. ಶತ್ರು ರಾಷ್ಟ್ರಗಳಿಗೆ ನಾವು ಯಾವುದಕ್ಕೂ ಸಿದ್ಧ ಎನ್ನುವ ಖಚಿತ ಉತ್ತರ ನೀಡಿದವರು ಮೋದಿ.

ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್ ಸ್ವಾರ್ಥ, ಅಂಜುಬುರುಕುತನದಿಂದ ಆಡಳಿತ ನಡೆಸಿದ್ದರೆ ಮೋದಿ ನಿಸ್ವಾರ್ಥದಿಂದ, ದೇಶಕ್ಕಾಗಿ ಎಲ್ಲ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಮತ್ತೊಂದು ಸಂಸ್ಕೃತಿ ಧ್ವಂಸ ಮಾಡಿ ಹಿಂದೂ ಧರ್ಮ ಕಟ್ಟಲು ಅವರು ಪ್ರಯತ್ನಿಸಿಲ್ಲ. ಕಾಂಗ್ರೆಸ್ ತನ್ನ ತುಷ್ಟಿಕರಣದ ಮೂಲಕ ಮುಸ್ಲಿಮರನ್ನು ಬಳಸಿಕೊಂಡು ಅವರನ್ನು ನಾಶ ಮಾಡುತ್ತ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಯೋಧರಾದ ರಮೇಶ ನಾಯ್ಕ, ಷಣ್ಮುಖ ಗೌಡ, ವಸಂತ ನಾಯ್ಕ, ರಾಜೇಶ ನಾಯ್ಕರನ್ನು, ಕರಸೇವಕರಾದ ಲಕ್ಷ್ಮಣ ನಾಯ್ಕ ಡೊಂಬೆ, ಶ್ರೀಧರ ಭಟ್ ಶಿರಳಗಿ ಅವರನ್ನು ಸನ್ಮಾನಿಸಲಾಯಿತು. ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಕುಮಟಾ ಪ್ರಾಸ್ತಾವಿಕವಾಗಿ ಮಾತನಾಡಿದರು.