ಸಾರಾಂಶ
-ಬೃಹತ್ ತಾಲೂಕುಮಟ್ಟದ ವ್ಯಾಸೆಕ್ಟಮಿ ಪಾಕ್ಷಿಕದಲ್ಲಿ ಡಾ.ರೇಖಾ ಮನವಿ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಹಿಂಜರಿಕೆ, ಸಂಕೋಚ, ಭಯ ಬಿಟ್ಟು ಪುರುಷರು ಎನ್‍ಎಸ್‍ವಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಹೆಣ್ಣು ಮಕ್ಕಳಿಗೆ ಸಮಾನತೆ ನೀಡಬೇಕೆಂದು ಜಿಲ್ಲಾ ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನಾಧಿಕಾರಿ ಡಾ.ರೇಖಾ ಹೇಳಿದರು.ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಐಸಿಡಿಎಸ್ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆದ ವಿಶೇಷ ಸಭೆಯಲ್ಲಿ ಕುಟುಂಬ ಯೋಜನೆ ಅನುಷ್ಠಾನದಲ್ಲಿ ಪುರುಷರ ಸಹಭಾಗಿತ್ವ ಕುರಿತು ಆಯೋಜಿಸಿದ್ದ ಬೃಹತ್ ತಾಲೂಕು ಮಟ್ಟದ ವ್ಯಾಸೆಕ್ಟಮಿ ಪಾಕ್ಷಿಕದಲ್ಲಿ ಮಾತನಾಡಿದ ಅವರು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಮಹಿಳೆಯರೇ ಒಳಗಾಗಬೇಕೆಂದು ಮನಸ್ಥಿತಿಯಿಂದ ಹೊರ ಬರಬೇಕೆಂದು ಮನವಿ ಮಾಡಿದರು.
21 ರಿಂದ 28 ರವರೆಗೆ ಎನ್‍ಎಸ್‍ವಿ ಕುಟುಂಬ ಕಲ್ಯಾಣ ಯೋಜನೆ ಪುರುಷರಿಗಾಗಿ ಎಂಬ ವಿಷಯದ ಬಗ್ಗೆ ಸಮುದಾಯದೊಂದಿಗೆ ಅರಿವು ಸಪ್ತಾಹ ಹಾಗೂ 28 ರಿಂದ ಡಿ.04 ರವರೆಗೆ ಎನ್‍ಎಸ್‍ವಿ ಶಸ್ತ್ರಚಿಕಿತ್ಸೆಯ ಸೇವಾ ಸೌಲಭ್ಯವನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಈ ದಿನ ನಾವು ಸಂವಿಧಾನ ದಿನ ಆಚರಣೆ ಮಾಡಿದ್ದೇವೆ. ಸಮಾನತೆ, ಭ್ರಾತೃತ್ವದ ಬಗ್ಗೆ ಮಾತನಾಡಿದ್ದೇವೆ. ಕುಟುಂಬದ ಎಲ್ಲಾ ಜವಾಬ್ದಾರಿ ಹೊತ್ತ ಮಹಿಳೆಯರಿಗೆ ಪುರುಷರು ಕುಟುಂಬ ಯೋಜನೆ ಅನುಸರಿಸುವ ಮೂಲಕ ಸಮಾನತೆಯ ಭಾವ ತೋರಿಸಬೇಕು. ಎನ್‍ಎಸ್‍ವಿ ಸರಳ ಹೊಲಿಗೆ ರಹಿತ ಶಸ್ತ್ರ ಚಿಕಿತ್ಸೆಯಾಗಿದೆ. ನೋವಿಲ್ಲದ, ಹೆಚ್ಚು ಸಮಯ ಆಸ್ಪತ್ರೆಯಲ್ಲಿ ತಂಗುವ ಗೋಜು ಇರುವುದಿಲ್ಲ. ಈ ಸರಳ ವಿಧಾನದಲ್ಲಿ ಪುರುಷರು ಭಾಗವಹಿಸಿದಲ್ಲಿ ತಾಯಂದಿರ ಮರಣ ತಪ್ಪಿಸಬಹುದು. ಅವರ ಮೇಲೆ ಬೀಳುವ ಹೊರೆ ಕಡಿಮೆ ಮಾಡಿ ಸಮಾನತೆ ತೋರಿಸಬಹುದು ಎಂದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಗೌರಮ್ಮ ಮಾತನಾಡಿ, ಹೆಂಡತಿಯನ್ನು ಪ್ರೀತಿಸುವ ಗಂಡ ಎನ್‍ಎಸ್‍ವಿ ಮಾಡಿಸಿಕೊಳ್ಳುತ್ತಾನೆ. ಅಂಗನವಾಡಿ ಕಾರ್ಯಕರ್ತೆಯರ ಬಳಿ ಗರ್ಭಿಣಿ, ಹಾಲುಣಿಸುವ ತಾಯಂದಿರು ಸದಾ ಸಂಪರ್ಕದಲ್ಲಿ ಇರುತ್ತಾರೆ. ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾಗಿದ್ದು, ಇವರೊಂದಿಗೆ ತಾವು ಸೇರಿ ಅತ್ತೆ ಸೊಸೆಯರ ಸಭೆ ನಡೆಸಿ ಅರ್ಹ ದಂಪತಿಗೆ ಮನವೊಲಿಸಿ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ನಮಗೆ ಮಾಹಿತಿ ನೀಡಿದರೆ ಮನೆ ಬಾಗಿಲಿಗೆ ಬಂದು ದಂಪತಿಗೆ ಸಮಾಲೋಚನೆ ನೀಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಮಾಹಿತಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಕಾತ್ಯಾಯನಮ್ಮ, ತಿಪ್ಪಮ್ಮ, ನಗರ ಆರೋಗ್ಯ ಕೇಂದ್ರಗಳ ಎಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ವ್ಯವಸ್ಥಾಪಕ ಮಹಮ್ಮದ್ ಅಲಿ, ಹಬೀಬ್, ನಾಗವೇಣಿ, ಆಶಾ ಬೋಧಕಿ ತಬೀತಾ, ಪ್ರತಿಭಾ ಇದ್ದರು.---------
ಪೋಟೋ: ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಐಸಿಡಿಎಸ್ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆದ ವಿಶೇಷ ಸಭೆಯಲ್ಲಿ ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಮಾಹಿತಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು----------
ಫೋಟೋ: 26 ಸಿಟಿಡಿ1