ಸಾರಾಂಶ
ಭಾರತದ ಸಂವಿಧಾನವು ವಿಶ್ವದ ಅತ್ಯಂತ ಸುದೀರ್ಘವಾದ ಲಿಖಿತ ಸಂವಿಧಾನವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕಾನೂನು ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಕಾಯಂ ಜನತಾ ನ್ಯಾಯಾಲಯ ಅಧ್ಯಕ್ಷರು ಹಾಗೂ ಜಿಲ್ಲಾ ನ್ಯಾಯಾಧೀಶರಾದ ವಿಮಲಾ ಆರ್. ನಂದಗಾಂವ್ ಕರೆ ನೀಡಿದರು.ನಗರದ ಮಹಾಜನ ಕಾಲೇಜು ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಮಹಾಜನ ಕಾನೂನು ಕಾಲೇಜು ಸಂಯುಕ್ತವಾಗಿ 75ನೇ ವರ್ಷದ ಸಂವಿಧಾನ ದಿನಾಚರಣೆಯ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಸಮಕಾಲೀನ ಭಾರತ ಕುರಿತ ವಿಶೇಷ ಉಪನ್ಯಾಸವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನವು ವಿಶ್ವದ ಅತ್ಯಂತ ಸುದೀರ್ಘವಾದ ಲಿಖಿತ ಸಂವಿಧಾನವಾಗಿದೆ. ನ್ಯಾಯ, ಸ್ವಾತಂತ್ರ್ಯ ಮತ್ತು ಬಾತೃತ್ವ ತತ್ವಗಳ ಮೇಲೆ ಒತ್ತು ನೀಡುವ ಭಾರತದ ಪ್ರಜಾಸತ್ತಾತ್ಮಕ ನೀತಿಯ ತಳಹದಿಯಾಗಿದೆ. ಭಾರತಕ್ಕೆ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ತಳಹದಿಯನ್ನು ಒದಗಿಸಿಕೊಟ್ಟ ಭಾರತದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ತಿಳಿಸಿದರು.ಸಂವಿಧಾನ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಸಮಕಾಲಿನ ಭಾರತ ಕುರಿತು ಹಿರಿಯ ರಾಜಕೀಯ ವಿಜ್ಞಾನಿ ಡಾ.ಎಸ್.ಎಂ. ರಾಜಶೇಖರ್ ಮಾತನಾಡಿ, ಇಡೀ ವಿಶ್ವದಾದ್ಯಂತ ಡಾ. ಅಂಬೇಡ್ಕರ್ ಅವರ ಚಿಂತನೆಗಳಿಗೆ ಮನ್ನಣೆ ನೀಡಲಾಗುತ್ತದೆ. ಅಂತಹ ವಿಶ್ವಮಾನವನಿಗೆ ಗೌರವ ಸಮರ್ಪಿಸುವ ದಿನವೇ ಸಂವಿಧಾನ ದಿನವಾಗಿದೆ ಎಂದರು.
ಭಾರತ ಸಂವಿಧಾನ ನಮ್ಮ ಹೆಮ್ಮೆ, ಅದು ಕಾನೂನು ಬದ್ಧ ಪಾವಿತ್ರ್ಯತೆಯನ್ನು ಹೊಂದಿರುವ ಗ್ರಂಥವಾಗಿದೆ. ಇಂತಹ ಭಾರತದ ಸಂವಿಧಾನದ ಸ್ಫೂರ್ತಿ ಮತ್ತು ಆಶಯಗಳನ್ನು ಗೌರವಿಸುವುದು ಸಂರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಮೂಲಭೂತ ಹಕ್ಕುಗಳಂತೆ ಮೂಲಭೂತ ಕರ್ತವ್ಯಗಳನ್ನು ಸರಿಸಮಾನವಾಗಿ ಪಾಲಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರು, ಎಲ್ಲರಿಗೂ ಭಾರತ ಸಂವಿಧಾನದ ಪ್ರಸ್ತಾವನ ವಿಧಿಯನ್ನು ಬೋಧಿಸಿದರು.
ಮಹಾಜನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ಮುರಳೀಧರ್, ಡಾ. ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಡಾ.ಜೆ. ಸೋಮಶೇಖರ್, ಮಹಾಜನ ಕಾನೂನು ಕಾಲೇಜು ಪ್ರಾಂಶುಪಾಲೆ ಕೆ. ಸೌಮ್ಯಾ ಇದ್ದರು.