ಬೆಳಗ್ಗೆಯೇ ಕೈಕೊಟ್ಟ ಮೆಟ್ರೋ: ಪ್ರಯಾಣಿಕರ ತೀವ್ರ ಪರದಾಟ

| Published : Mar 28 2024, 01:31 AM IST / Updated: Mar 28 2024, 01:22 PM IST

ಸಾರಾಂಶ

ನಮ್ಮ ಮೆಟ್ರೋದಲ್ಲಿ ಬುಧವಾರ ಬೆಳಗ್ಗೆ ಪುನಃ ತಾಂತ್ರಿಕ ದೋಷ ಉಂಟಾಗಿದ್ದು, ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸುಮಾರು ಒಂದು ಗಂಟೆ ಕಾಲ ಮೆಟ್ರೋ ರೈಲುಗಳ ಸಂಚಾರ ವಿಳಂಬಗೊಂಡು ಪ್ರಯಾಣಿಕರು ಪರದಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋದಲ್ಲಿ ಬುಧವಾರ ಬೆಳಗ್ಗೆ ಪುನಃ ತಾಂತ್ರಿಕ ದೋಷ ಉಂಟಾಗಿದ್ದು, ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸುಮಾರು ಒಂದು ಗಂಟೆ ಕಾಲ ಮೆಟ್ರೋ ರೈಲುಗಳ ಸಂಚಾರ ವಿಳಂಬಗೊಂಡು ಪ್ರಯಾಣಿಕರು ಪರದಾಡಿದರು.

ನೇರಳೆ ಮಾರ್ಗದಲ್ಲಿ ಸಿಗ್ನಲ್ ವೈಫಲ್ಯದಿಂದಾಗಿ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವೆ ಬೆಳಗ್ಗೆ 6.40ರಿಂದ 7.40ರವರೆಗೂ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಿಗ್ನಲ್ ವೈಫಲ್ಯದಿಂದ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವೆ ರೈಲುಗಳು ನಿಧಾನಗತಿಯಲ್ಲಿ ಚಲಿಸಿದವು. 

ಪರಿಣಾಮ 10-12 ರೈಲುಗಳಲ್ಲಿ ಪ್ರಯಾಣಿಸಿದ ಜನತೆ ತೊಂದರೆಗೀಡಾದರು. ಮುಖ್ಯವಾಗಿ ಬೆಳಗ್ಗೆ ಕೆಲಸಕ್ಕೆ ತೆರಳುವವರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾದರು. 

ಒಂದು ಗಂಟೆ ಬಳಿಕ ಸಿಗ್ನಲಿಂಗ್‌ ಸರಿಪಡಿಸಿದ ನಂತರ ರೈಲುಗಳು ಸಹಜ ವೇಗದಲ್ಲಿ ಸಂಚರಿಸಿದವು ಎಂದು ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈಚೆಗೆ ಮೆಟ್ರೋ ಮಾರ್ಗದಲ್ಲಿ ಪದೇ ಪದೇ ತಾಂತ್ರಿಕ ದೋಷ ಉಂಟಾಗುತ್ತಿದ್ದು, ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಕಾರಣ. ಸಿಗ್ನಲಿಂಗ್‌ ಸಮಸ್ಯೆ ಪರಿಹರಿಸುವತ್ತ ಮೆಟ್ರೋ ಹೆಚ್ಚು ಗಮನಹರಿಸಬೇಕು ಎಂದು ಸಾರಿಗೆ ತಜ್ಞರು ಒತ್ತಾಯಿಸಿದ್ದಾರೆ.