ಲೋಕಸಭಾ ಚುನಾವಣೆ: ಗೋವಿಂದ ಕಾರಜೋಳಗೆ ಚಿತ್ರದುರ್ಗ ಟಿಕೆಟ್‌

| Published : Mar 28 2024, 01:30 AM IST / Updated: Mar 28 2024, 01:16 PM IST

Govinda Karajola
ಲೋಕಸಭಾ ಚುನಾವಣೆ: ಗೋವಿಂದ ಕಾರಜೋಳಗೆ ಚಿತ್ರದುರ್ಗ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಪಾಲಿನ ರಾಜ್ಯದ ಎಲ್ಲ 25 ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಪೂರ್ಣವಾಗಿದ್ದು, ಚಿತ್ರದುರ್ಗದಲ್ಲಿ ಅಂತಿಮವಾಗಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಟಿಕೆಟ್‌ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. 

ಈ ಮೂಲಕ ಬಿಜೆಪಿಯು ರಾಜ್ಯದಲ್ಲಿನ ತನ್ನ ಪಾಲಿನ ಎಲ್ಲ ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.ಚಿತ್ರದುರ್ಗದ ಹಾಲಿ ಸಂಸದರಾಗಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸೋಲಿನ ಭಯದಿಂದ ಈ ಬಾರಿ ಸ್ಪರ್ಧಿಸಲು ಹಿಂಜರಿದಿದ್ದರು. 

ಜತೆಗೆ ತಮಗೆ ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣವೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ, ಪರ್ಯಾಯ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ ವೇಳೆ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ರಾಜಕಾರಣಕ್ಕೆ ಕರೆತರುವ ಪ್ರಯತ್ನ ನಡೆದರೂ ಅದು ಸಫಲವಾಗಲಿಲ್ಲ. 

ಅದೇ ಸಮಯದಲ್ಲಿ ಮಾಜಿ ಸಂಸದ ಜನಾರ್ದನಸ್ವಾಮಿ, ಹೊಳಲ್ಕೆರೆಯ ಹಾಲಿ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್‌ ಅವರ ಹೆಸರುಗಳು ಕೇಳಿಬರುತ್ತಿದ್ದವು.

ಆದರೆ, ಚಿತ್ರದುರ್ಗ ಕ್ಷೇತ್ರದಿಂದ ಮಾದಿಗ ಸಮುದಾಯದವರನ್ನು ಕಣಕ್ಕಿಳಿಸಿದರೆ ಸುತ್ತಲಿನ ನಾಲ್ಕೈದು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಅದೇ ಸಮುದಾಯಕ್ಕೆ ಸೇರಿದ ಹಾಲಿ ಸಂಸದ ನಾರಾಯಣಸ್ವಾಮಿ ಅವರನ್ನೇ ಮನವೊಲಿಸುವ ಒಂದು ಸುತ್ತಿನ ಪ್ರಯತ್ನವೂ ನಡೆಯಿತು. 

ಆದರೆ, ನಾರಾಯಣಸ್ವಾಮಿ ಬಿಲ್‌ಕುಲ್‌ ಒಪ್ಪಲಿಲ್ಲ. ಆಗ ಮಾದಿಗ ಸಮುದಾಯದ ಹಿರಿಯ ನಾಯಕರಾಗಿರುವ ಹಾಗೂ ಸಜ್ಜನ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೋವಿಂದ ಕಾರಜೋಳ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ನಾಯಕರು ತೀರ್ಮಾನಿಸಿದರು.

ಕಾರಜೋಳ ಅವರು ಕೆಲದಿನಗಳ ಹಿಂದೆ ತವರು ಜಿಲ್ಲೆ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ವದಂತಿ ಹಬ್ಬಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಲ್ಲಿನ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರನ್ನು ಕೈಬಿಡುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆಯಾಗಿತ್ತು. 

ಆದರೆ, ಕೊನೆಯ ಹಂತದಲ್ಲಿ ಜಿಗಜಿಣಗಿ ತಮಗೆ ಈ ಬಾರಿ ಮತ್ತೊಮ್ಮೆ ಟಿಕೆಟ್ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ಕಾರಜೋಳ ಅವರ ಹೆಸರು ಕೈಬಿಡಬೇಕಾಯಿತು.

ಆರಂಭದಲ್ಲಿ ಕಾರಜೋಳ ಅವರು ಸ್ಪರ್ಧಿಸಲು ನಿರಾಕರಿಸಿದರು. ದೂರದ ವಿಜಯಪುರ ಅಥವಾ ಬಾಗಲಕೋಟೆ ಬಿಟ್ಟು ಚಿತ್ರದುರ್ಗದಿಂದ ಸ್ಪರ್ಧಿಸುವುದು ಪ್ರಯಾಸದಾಯಕ ಎಂಬ ಕಾರಣಕ್ಕಾಗಿ ತಮಗೆ ಟಿಕೆಟ್ ಬೇಡ ಎಂದೇ ಹೇಳಿದರು. 

ಆದರೆ, ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರೆಲ್ಲರೂ ಸ್ಪರ್ಧಿಸಲೇಬೇಕು ಎಂದು ಹೇಳಿದಾಗ ಕಾರಜೋಳ ಅವರು ಅಸ್ತು ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರಜೋಳ ಅವರು ತಮ್ಮ ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಆರ್‌.ಬಿ.ತಿಮ್ಮಾಪುರ ವಿರುದ್ಧ ಸೋಲುಂಡಿದ್ದರು.