ಕನಕಗಿರಿ: ರಾತ್ರೋರಾತ್ರಿ ದುಬಾರಿ ಬೆಲೆಯ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರ ತಂಡವೊಂದು 15ಕ್ಕೂ ಹೆಚ್ಚು ಗೋಣಿ ಚೀಲದಲ್ಲಿ ದಾಳಿಂಬೆ ತುಂಬಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಬಂಕಾಪುರದ ರಸ್ತೆ ಹೊರವಲಯದ ದಾಳಿಂಬೆ ತೋಟದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಡಿ. ಸೂರ್ಯ ನಾರಾಯಣರಾಜು ಗುತ್ತಿಗೆ ಪಡೆದಿರುವ ಕನಕಗಿರಿ ಸಿಮಾ ವ್ಯಾಪ್ತಿಯ ಸರ್ವೇ ನಂ.164ರಲ್ಲಿನ 4 ಎಕರೆ 10 ಗುಂಟೆಯಲ್ಲಿ ಬೆಳೆದ ದುಬಾರಿ ಬೆಲೆಯ ದಾಳಿಂಬೆ ತೋಟಕ್ಕೆ ನುಗ್ಗಿರುವ ಎಂಟತ್ತು ಜನ ಕಳ್ಳರ ಗುಂಪೊಂದು ಏ.18ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಳಿಂಬೆ ಹಣ್ಣನ್ನು ಮನ ಬಂದಂತೆ ಕಿತ್ತು ಹಾಕಿದ್ದಲ್ಲದೇ ಗಿಡಗಳನ್ನು ಕಿತ್ತೆಸೆದು ತೋಟ ನಾಶಪಡಿಸಿದ್ದಾರೆ. ತೋಟದಲ್ಲಿ ದಾಳಿಂಬೆ ಕಳ್ಳತನಕ್ಕೆ ಇಳಿದಾಗ ನಾಯಿಗಳು ಬೊಗಳಿವೆ. ಇಲ್ಲಿಯೇ ಮಲಗಿದ್ದ ಕೆಲಸ ಮಾಡುವ ಪ್ರಕಾಶ ಮತ್ತು ಇತನ ಪತ್ನಿಯ ನಾಯಿ ಬೊಗಳುವ ಶಬ್ದ ಕೇಳಿ ಧ್ವನಿ ಮಾಡಿ ತೋಟದ ಅಕ್ಕಪಕ್ಕದವರನ್ನು ಕೂಗಿ ಕರೆಯಲೆತ್ನಿಸಿದ್ದಾರೆ.

ಇದನ್ನು ಗಮನಿಸಿದ ಕಳ್ಳರು ತೋಟದಿಂದ ಓಡಿ ಹೋಗಿದ್ದಾರೆ. ದಾಳಿಂಬೆ ಹಣ್ಣನ್ನು ಕಳ್ಳತನ ಮಾಡಲು ತಂದಿದ್ದ ಆಟೋ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ₹1.5 ಲಕ್ಷ ಬೆಲೆ ಬಾಳುವ ದಾಳಿಂಬೆ ಹಣ್ಣನ್ನು ಗೋಣಿಚೀಲದಲ್ಲಿ ತುಂಬಿ ಆಟೋದಲ್ಲಿ ಸಾಗಿಸಲು ಸಿದ್ಧ ಮಾಡಿಕೊಂಡಿದ್ದಾರೆ. ತೋಟದಲ್ಲಿನ ಶಬ್ದ ಕೇಳಿ ಬ್ಯಾಟರಿ ಬಿಟ್ಟು ನೋಡಿದ ಕಾರ್ಮಿಕ ಪ್ರಕಾಶನ ಕಣ್ಣಿಗೆ ದಾಳಿಂಬೆ ತುಂಬಿ ನಿಲ್ಲಿಸಿದ ಆಟೋ ಕಂಡಿದೆ. ಹೀಗೆ ಆಟೋ ಬಿಟ್ಟು ಪರಾರಿಯಾಗುತ್ತಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದರೂ ಸಿಗಲಿಲ್ಲ.

ಕೂಡಲೇ 112ಗೆ ಕರೆ ಮಾಡಿ ರೈತರು ದೂರು ನೀಡಿದ್ದು, ಪಿಐ ವಿ. ನಾರಾಯಣ ನೇತೃತ್ವದ ಪೊಲೀಸರ ತಂಡವೂ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿಯೇ ಇದ್ದ ಆಟೋ ವಶಕ್ಕೆ ಪಡೆದಿದ್ದಾರೆ.

ನಿರಂತರ ಕಳ್ಳತನ: ಆಕ್ರೋಶ : ದಾಳಿಂಬೆ ಕಳ್ಳತನ ಮಾಡುವುದೇನು ಇದೇ ಮೊದಲಲ್ಲ. ಈ ಹಿಂದೆ ನಾಗಲಾಪುರದ ಮಂಜುನಾಥ ಪಾಟೀಲ್, ಪಪಂ ಸದಸ್ಯ ಶರಣೆಗೌಡ ಪಾಟೀಲ್, ದೀಲಿಪ್ ರಾಜು, ನಾಗೇಶ್ವರರಾವ್ ಸೇರಿದಂತೆ ಅನೇಕ ರೈತರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ ದುಬಾರಿ ಬೆಲೆ ಬಾಳುವ ದಾಳಿಂಬೆ, ಮೋಟಾರ್, ಕೇಬಲ್ ಸೇರಿದಂತೆ ಕೃಷಿ ಸಾಮಗ್ರಿ ಕಳ್ಳತನ ಮಾಡುವುದು ನಿರಂತರವಾಗಿ ನಡೆದಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.