ಎಂ. ಪ್ರಹ್ಲಾದ್ ಕನಕಗಿರಿ
ರಾಜ್ಯದ ಹಲವು ಉತ್ಸವಗಳ ಆಚರಣೆಯ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಮ್ಮದೇ ತವರು ಕ್ಷೇತ್ರದ ಕನಕಗಿರಿ ಉತ್ಸವ ಆಚರಣೆಗೆ ಮುಂದಾಗಿದ್ದು, ಬಿಸಿಲಿನ ಬೇಗೆಯ ನಡುವೆಯೂ ಕನಕಗಿರಿ ಜನತೆಯಲ್ಲಿ ಉತ್ಸವದ ಸಂಭ್ರಮ ಶುರುವಾಗಿದೆ.ಹೌದು, 2025ರಲ್ಲಿ ಕನಕಾಚಲಪತಿ ಜಾತ್ರೆಯೊಂದಿಗೆ ಕನಕಗಿರಿ ಉತ್ಸವ ಆಚರಿಸಲು ಮುಂದಾಗಿದ್ದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉತ್ಸವ ಆಚರಣೆ ಕೈಬಿಡಲಾಗಿತ್ತು. 2026ರ ಸಾಲಿನಲ್ಲಾದರೂ ಉತ್ಸವ ಆಚರಿಸಬೇಕೆನ್ನುವ ಕೂಗು ಸ್ಥಳೀಯ ಕನ್ನಡಪರ ಸಂಘಟನೆ ಹಾಗೂ ಸಾರ್ವಜನಿಕರಿಂದ ಬಂದಿದ್ದರಿಂದ ಕನಕಗಿರಿ ಉತ್ಸವ ಆಚರಿಸಲು ಸಚಿವರು ಆಸಕ್ತಿ ತೋರಿದ್ದು, ಉತ್ಸವ ಆಚರಣೆಯ ಕುರಿತು ಏ. ೨೧ರಂದು ಕನಕಾಚಲಪತಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.
ಜಾತ್ರೆಯ ಜತೆಗೆ ಉತ್ಸವ ಆಚರಿಸಿದರೆ, ಪ್ರತಿ ವರ್ಷವೂ ಜಾತ್ರೆಯಲ್ಲಿ ಉತ್ಸವ ನಡೆಯಲಿದೆ. ಜಾತ್ರೆ ಮತ್ತು ಉತ್ಸವ ಎರಡನ್ನು ಪ್ರತ್ಯೇಕವಾಗಿ ಆಚರಿಸುವುದರಿಂದ ಒಂದರ ಎರಡರಷ್ಟು ಹಣ ವ್ಯಯವಾಗಲಿದೆ. ಎರಡೂ ಒಟ್ಟಿಗೆ ಆಚರಿಸುವುದರಿಂದ ಹಣ ಕಡಿಮೆ ಖರ್ಚಾಗಲಿದೆಯಲ್ಲದೇ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲು ಸಾಧ್ಯವಾಗಲಿದೆ. ಅಧಿಕಾರಿಗಳು ಎರಡೆರಡು ಬಾರಿ ಕೆಲಸ ಮಾಡುವುದು ತಪ್ಪಲಿದೆ. ಇದೆಲ್ಲದಕ್ಕೂ ಜಾತ್ರೆ ವೇಳೆ ಉತ್ಸವ ಆಚರಣೆ ಮಾಡಿದರೆ ಎಲ್ಲ ರೀತಿಯಲ್ಲೂ ಅನುಕೂಲವಿದೆ. ಅದಕ್ಕಾಗಿ ಜಾತ್ರೆಯಲ್ಲಿಯೇ ಉತ್ಸವ ಆಚರಿಸುವುದಕ್ಕೆ ಸ್ಥಳೀಯರೂ ಸಮ್ಮತಿಸಿದ್ದಾರೆ. ಮುಂಬರುವ ವರ್ಷದಿಂದ ಜಾತ್ರೆಯೊಂದಿಗೆ ಉತ್ಸವ ಆಚರಿಸುವ ಸಂಪ್ರದಾಯ ಮುನ್ನೆಲೆಗೆ ಬರಲಿದೆ.ಸಚಿವ ತಂಗಡಗಿಯವರೇ 2010ರಲ್ಲಿ ಕನಕಗಿರಿ ಉತ್ಸವ ಆಚರಣೆ ಆರಂಭಿಸಿದರು. ಇದಾದ ನಂತರ 2013, 2015 ಹಾಗೂ 2024ರಲ್ಲಿ ಇವರೆಗೂ ನಾಲ್ಕು ಬಾರಿ ಉತ್ಸವ ಆಚರಿಸಲಾಗಿದೆ. ಈ ಬಾರಿ ೫ನೇ ಉತ್ಸವ ನಡೆಸಲು ಸಚಿವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇತ್ತ ಕಾರ್ಯಕರ್ತರು ಸಹ ಸೇವೆಗೆ ಸನ್ನದ್ಧರಾಗಿದ್ದು, ಉತ್ಸವ ಜನೋತ್ಸವವಾಗಿಸಲು ಸ್ಥಳೀಯರು ಕಾತುರರಾಗಿದ್ದಾರೆ. ಇನ್ನೂ ಏ. ೨೯ರ ನಂತರ ಕಲ್ಯಾಣ ಕರ್ನಾಟಕದಲ್ಲಿ ಬಿಸಿ ಗಾಳಿ ಹೆಚ್ಚಾಗುವುದರಿಂದ ಉತ್ಸವ ನಡೆಸುವುದು ಸಮಂಜಸವಲ್ಲ ಎನ್ನುವ ಚರ್ಚೆ ಅಧಿಕಾರಿ ವಲಯದಲ್ಲಿದೆ.
ವಿಜಯನಗರ ಕಾಲದ ಕನಕಗಿರಿ ನಾಡಿನ ಐತಿಹ್ಯ ಕೇಂದ್ರವಾಗಿದೆ. ಇಲ್ಲಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆ ವರ್ಷದಿಂದ ವರ್ಷಕ್ಕೆ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಉತ್ಸವ ಆಚರಣೆಯಾಗಬೇಕು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಕರವೇ ಮುಖಂಡ ಬಸವರಾಜ ಕೋರಿ ತಿಳಿಸಿದ್ದಾರೆ.
ಜಾತ್ರೆಯೊಂದಿಗೆ ಉತ್ಸವ ಆಚರಿಸಿದರೆ ಇನ್ನಷ್ಟು ಅದ್ಧೂರಿಯಾಗಿ ಮಾಡಬಹುದು. ಬೇಸಿಗೆ ದಿನಗಳಲ್ಲಿ ಉತ್ಸವಗಳಿಗೆ ಜನರು ಬರುವುದು ಕಷ್ಟ. ಆದರೂ ಸ್ಥಳೀಯರ, ಸಂಘಟನೆಗಳ ಮನವಿಗೆ ಸ್ಪಂದಿಸಿ ಕನಕಗಿರಿ ಉತ್ಸವ ಆಚರಣೆ ಅದ್ಧೂರಿಯಾಗಿ ಮಾಡುವ ಆಶಯ ಹೊಂದಿರುವೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.