ಏಕನಾಥ ಮೆದಿಕೇರಿ ಹನುಮಸಾಗರ
ಸ್ಥಳೀಯ ಅನ್ನದಾನೇಶ್ವರ ಗ್ರಾಮೀಣ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ಏರುಪೇರು ಉಂಟಾಗಿದ್ದು, ಇದರಿಂದ ಗ್ರಾಹಕರು ಹಾಗೂ ವ್ಯಾಪಾರಸ್ಥರು ಪರದಾಡುವಂತಾಗಿದೆ. ಸಿಲಿಂಡರ್ ಅಭಾವದ ನಡುವೆ ಗ್ರಾಹಕರ ಅಡ್ವಾನ್ಸ್ ಬುಕ್ಕಿಂಗ್ ತಲೆನೋವಾಗಿ ಪರಿಣಮಿಸಿದೆ.971 ಗ್ರಾಹಕರು ಸಿಲಿಂಡರ್ ಬುಕ್ ಮಾಡಿದ್ದಾರೆ. ಆದರೆ ಸಿಲಿಂಡರ್ ವಿತರಣಾ ವಾಹನ ಗ್ರಾಮಗಳಿಗೆ ತಲುಪಿದಾಗ ಬುಕ್ ಮಾಡಿದವರ ಪೈಕಿ 400 ರಿಂದ 500 ಜನರ ಬಳಿ ಖಾಲಿ ಸಿಲಿಂಡರ್ ಇರುವುದಿಲ್ಲ. ಸಿಲಿಂಡರ್ ಖಾಲಿಯಾಗುವ ಮೊದಲೇ ಬುಕ್ ಮಾಡುವುದರಿಂದ ಈ ಸಮಸ್ಯೆ ಆಗಿದೆ. ಇದರಿಂದ ಅವಶ್ಯಕತೆ ಇರುವವರಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಈ ಗ್ಯಾಸ್ ವಿತರಣಾ ಕೇಂದ್ರವು ಹನುಮಸಾಗರ ಸುತ್ತಮುತ್ತಲಿನ 68 ಗ್ರಾಮಗಳ ಜವಾಬ್ದಾರಿ ಹೊತ್ತಿದೆ. ಪ್ರತಿದಿನ ಎರಡರಿಂದ ಮೂರು ವಾಹನ ನಿರಂತರವಾಗಿ ವಿತರಣೆ ಮಾಡುತ್ತಿದ್ದರೂ ಬುಕ್ಕಿಂಗ್ ಸಂಖ್ಯೆ ಏರುತ್ತಲೆ ಇದೆ.ಹೊಸ ನಿಯಮ: ಫೋನ್ ಮೂಲಕ ಬುಕ್ ಮಾಡಿದವರಿಗೆ ತಕ್ಷಣ ಡಿಎಸಿ ಸಂಖ್ಯೆ ಬರದಿದ್ದರೆ ಆತಂಕ ಪಡಬೇಕಿಲ್ಲ. ಬುಕ್ಕಿಂಗ್ ಮಾಡಿದ 4 ದಿನಗಳ ನಂತರ ಕಚೇರಿಗೆ ಬಂದು ಮೊಬೈಲ್ ಮೇಸೆಜ್ ಅಪ್‌ಡೆಟ್ ಮಾಡಿಸಿಕೊಳ್ಳಬಹುದು.
ಮರು ಬುಕ್ಕಿಂಗ್ ಕಾಲಮಿತಿ: ಗ್ರಾಮೀಣ ಭಾಗದ ಗ್ರಾಹಕರು ಒಂದು ಸಿಲಿಂಡರ್ ಪಡೆದ ನಂತರ ಮತ್ತೆ ಬುಕ್ ಮಾಡಲು ೪೫ ದಿನಗಳ ಕಾಲ ಕಾಯಬೇಕು. ಪಟ್ಟಣ ಪ್ರದೇಶದವರಿಗೆ ಈ ಅವಧಿಯನ್ನು ೨೫ ದಿನಗಳಿಗೆ ನಿಗದಿಪಡಿಸಲಾಗಿದೆ.
ಹೋಟೆಲ್, ಖಾನಾವಳಿ ಸ್ಥಿತಿ ಗಂಭೀರ: ವಾಣಿಜ್ಯ ಸಿಲಿಂಡರ್ ಅಭಾವ ತೀವ್ರವಾಗಿದ್ದು, ಹೋಟೆಲ್, ಖಾನಾವಳಿ ಹಾಗೂ ಡಾಬಾ ನಡೆಸುವವರಿಗೆ ಸಂಕಷ್ಟ ಎದುರಾಗಿದೆ. ತಿಂಗಳಿಗೆ 10 ಸಿಲಿಂಡರ್ ಬಳಸುತ್ತಿದ್ದವರಿಗೆ ಈಗ ಕೇವಲ 3 ಸಿಲಿಂಡರ್ ಮಾತ್ರ ನೀಡಲಾಗುತ್ತಿದೆ. ಪೂರೈಕೆಯಲ್ಲಿ ಶೇ. 70ರಷ್ಟು ಕಡಿತ ಮಾಡಿದ್ದರಿಂದ ವ್ಯಾಪಾರಸ್ಥರು ಅನಿವಾರ್ಯವಾಗಿ ಕಟ್ಟಿಗೆ, ಕರೆಂಟ್ ಒಲೆಗಳ ಮೊರೆ ಹೋಗುತ್ತಿದ್ದಾರೆ.
ಜನರು ತಮ್ಮ ಬಳಿ ಸಿಲಿಂಡರ್ ಇರುವಾಗಲೇ ಭಯದಿಂದ ಬುಕ್ಕಿಂಗ್ ಮಾಡುತ್ತಿದ್ದಾರೆ. ನಾವು ಮನೆಗೆ ಹೋದಾಗ ಅವರ ಬಳಿ ಖಾಲಿ ಸಿಲಿಂಡರ್ ಇರುವುದಿಲ್ಲ. ಇದರಿಂದ ನಿಜವಾದ ಅವಶ್ಯಕತೆ ಇರುವವರಿಗೆ ಸಿಲಿಂಡರ್ ಸಿಗುತ್ತಿಲ್ಲ ಎಂದು ಅನ್ನದಾನೇಶ್ವರ ಗ್ರಾಮೀಣ ಇಂಡಿಯನ್ ಗ್ಯಾಸ್ ವಿತರಕ ಪ್ರಶಾಂತ್ ಕುಷ್ಟಗಿ ತಿಳಿಸಿದ್ದಾರೆ.