ಕುಷ್ಟಗಿ: ಸಾರ್ವಜನಿಕರು ಪ್ರತಿಯೊಂದು ಮನೆಯಲ್ಲಿ ಪೂಜಾ ಮನೆ ಜತೆಗೆ ಗ್ರಂಥಾಲಯ ನಿರ್ಮಿಸುವ ಕೆಲಸವಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯಾಧ್ಯಕ್ಷ ಡಾ. ಮಾನಸ ಹೇಳಿದರು.

ಪಟ್ಟಣದ ಮಾಜಿ ಶಾಸಕ ಕೆ.ಶರಣಪ್ಪ ವಕೀಲರ ಮನೆಯಲ್ಲಿ ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಆಶ್ರಯದಲ್ಲಿ ನಡೆದ ಲಕ್ಷ ಗ್ರಂಥಾಲಯಗಳ ಯೋಜನೆ ಮನೆಗೊಂದು ಗ್ರಂಥಾಲಯ ಉದ್ಘಾಟನೆ, ಗ್ರಂಥಾಲಯದ ರೂಪು ರೇಷೇಯ ಕರಪತ್ರ ವಿತರಿಸಿ ಮಾತನಾಡಿದರು.

ಪುಸ್ತಕ ನಮ್ಮೆಲ್ಲರ ಆಸ್ತಿಯಾಗಿದ್ದು, ಓದುವ ಅಭಿಯಾನ ವಿಸ್ತರಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಓದಬೇಕು, ಬರೆಯಬೇಕು ಎನ್ನುವ ಆಶಯದ ಅರ್ಥಪೂರ್ಣ ಮನಸುಗಳ ಮನೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿರುವುದು ಸಂತಸದ ಸಂಗತಿ ಎಂದರು.

ಜೀವನದಲ್ಲಿ ಎರಡು ರೂಪಾಯಿ ಗಳಿಸುತ್ತಿದ್ದರೆ ಒಂದು ರೂಪಾಯಿ ಆಹಾರಕ್ಕೆ ಬಳಸು ಮತ್ತೊಂದು ರೂಪಾಯಿ ಪುಸ್ತಕಕ್ಕೆ ಬಳಸು ಎಂಬುದು ಜ್ಞಾನ ಶಿಖರ ಡಾ.ಬಿ.ಆರ್. ಅಂಬೇಡ್ಕರ್ ಹೇಳಿಕೆಯಾಗಿದೆ.ಅದರಂತೆ ಮನೆಯಲ್ಲಿ ಪುಟ್ಟದೊಂದು ಗ್ರಂಥಾಲಯ ಇರಬೇಕು ಎಂಬ ಯೋಜನೆ ರೂಪುಗೊಳ್ಳಲು ಪ್ರೇರಣೆಯಾಯಿತು ಎಂದು ತಿಳಿಸಿದರು.

ನಾವೆಲ್ಲರೂ ಈಗಾಗಲೇ ಆಹಾರಕ್ಕಾಗಿ ಒಂದು ರೂಪಾಯಿ ಬಳಸಿದ್ದೇವೆ.ಆದರೆ ಪುಸ್ತಕಕ್ಕಾಗಿ ಮೀಸಲಿಡಬೇಕಾದ ಮತ್ತೊಂದು ರೂಪಾಯಿ ಇನ್ನಾವುದಕ್ಕೋ ಬಳಸಿದ್ದು ಅದನ್ನು ಹುಡುಕಲೆಂದೇ ನಾವು ಲಕ್ಷ ಗ್ರಂಥಾಲಯಗಳ ಯೋಜನೆ ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಲಕ್ಷ ಮನೆಗಳಲ್ಲಿ ಗ್ರಂಥಾಲಯದ ಬೀಜ ಬಿತ್ತುತ್ತೇವೆ ಎಂದರು. ಜನರನ್ನು ಪೂಜಾ ಮನೆಗೆ ಕನೆಕ್ಟ್ ಮಾಡಿದ್ದಕ್ಕಾಗಿ ವಿಭೂತಿ,ಕರ್ಪೂರ,ಊದು ಬತ್ತಿ ಖರೀದಿಸುತ್ತ ಸಾಗಿದ್ದರಿಂದ ಊದುಬತ್ತಿ ಮಾರುವವರು, ಕರ್ಪೂರ ಮಾರುವವರು ಜೀವನ ಕಟ್ಟಿಕೊಂಡರು. ಲಕ್ಷಾಧೀಶರಾದರು.ಆದರೆ, ಜ್ಞಾನ ದಾಹ ಹೆಚ್ಚುವ ಪುಸ್ತಕ ಪೂಜಾ ಸಾಮಗ್ರಿ ಜತೆಗೆ ಮಾರಾಟ ಮಾಡಲಿಲ್ಲ. ಈ ಕಾರಣದಿಂದಲೇ ಪುಸ್ತಕ ಪ್ರಕಟಿಸುವ ಮಾಲೀಕ ಈಗ ಬಡವನಾಗಿದ್ದಾನೆ ಎಂದರು.


ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಮಾತನಾಡಿ, ಕುಷ್ಟಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಜಾಮ್‌ ಆಡಳಿತ ಇದ್ದಿತು. ಬೇರೆ ಭಾಷೆಯ ಪ್ರಭಾವ ಹೆಚ್ಚಿತ್ತು. ಇಂತಹ ಕಾರಣದಿಂದ ಈ ಭಾಗ ಹಿಂದುಳಿಯಿತು. ಇಂತಹ ಪ್ರದೇಶದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆ ಅನುಷ್ಠಾನ ಕಾರ್ಯಕ್ರಮ ತಮ್ಮ ಮನೆಯಲ್ಲಿ ನೆರವೇರಿಸಿದ್ದಕ್ಕೆ ಸಂತೋಷವಾಯಿತು ಎಂದು ತಿಳಿಸಿದರು.

ವಿವಿಧೆಡೆ ಕಾರ್ಯಕ್ರಮ:

ಕುಷ್ಟಗಿ ಪಟ್ಟಣದ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ,ಸಾಹಿತಿ ಡಾ. ನಾಗರಾಜ ಹೀರಾ, ಅಮರೇಗೌಡ ಪಾಟೀಲ ಜಾಲಿಹಾಳ, ಜೀವನಸಾಬ್‌ ವಾಲೀಕಾರ, ಹನುಮೇಶ ಗುಮಗೇರಿ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪುರಸ್ಕೃತ ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಶರಣಬಸಪ್ಪ ಕೋಲ್ಕಾರ್, ಲೇಖಕಿ ಸಾವಿತ್ರಿ ಮುಜಮದಾರ, ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕ ಜಿ.ಎಸ್.ಗೋನಾಳ, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ, ಸಾಹಿತಿ ಹನುಮಂತಪ್ಪ ಈಟಿ, ಹನುಮೇಶ ಗುಮಗೇರಿ, ಉಮೇಶ ಹಿರೇಮಠ, ಪತ್ರಕರ್ತ ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ ಮಾಟಲದಿನ್ನಿ, ಸ.ಶರಣಪ್ಪ ಪಾಟೀಲ, ಶ್ರೀನಿವಾಸ ಕಂಟ್ಲಿ, ಉಮೇಶ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಬುಡ್ನೇಸಾಬ ಕಲಾದಗಿ ಸೇರಿದಂತೆ ಅನೇಕರು ಇದ್ದರು.

ಇದೆ ವೇಳೆ ಕುಷ್ಟಗಿ ತಾಲೂಕಿನ ಮದ್ನಾಳ ಗ್ರಾಮದಲ್ಲಿ ಶಿಕ್ಷಕ ಶರಣಪ್ಪ ತುಮರಿಕೊಪ್ಪ ಅವರು ಮಕ್ಕಳ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಿರುವ ನಿಮಿತ್ತ ಸನ್ಮಾನಿಸಿ ಗೌರವಿಸಲಾಯಿತು.