ಕನ್ನಡಪ್ರಭ ವಾರ್ತೆ ಲೋಕಾಪುರ

ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ಕಾರಣ ಮಾಜಿ ಸಚಿವ ಹಾಗೂ ಶಾಸಕ ಆರ್.ಬಿ.ತಿಮ್ಮಾಪುರ ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಕಾಣಿಸಿಕೊಂಡಿದ್ದು ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕೈ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಬೆಳಗಾವಿ-ರಾಯಚೂರ ಹಾಗೂ ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿಯನ್ನು ಕೆಲಕಾಲ ಬಂದ್‌ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು.

ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಆರ್.ಬಿ.ತಿಮ್ಮಾಪುರ ಅವರು ಕೇವಲ ಪಕ್ಷನಿಷ್ಠೇಯನ್ನೇ ಉಸಿರಾಗಿಸಿಕೊಂಡು ಬಂದವರು. ಕಷ್ಟ ಕಾಲದಲ್ಲಿ ಪಕ್ಷದ ಕೈಹಿಡಿದು ಮುನ್ನಡೆಸಿದ ಹಿರಿಯ ನಾಯಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ನೀಡದಿರುವುದು ಇಡೀ ಕ್ಷೇತ್ರದ ಜನತೆಗೆ ಮಾಡಿದ ದೊಡ್ಡ ಅವಮಾನವಾಗಿದೆ. ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡ ಗೋವಿಂದಪ್ಪ ಕೌಲಗಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಆನಂದ ಹಿರೇಮಠ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪಾಟೀಲ ಮಾತನಾಡಿ, ಆರ್.ಬಿ.ತಿಮ್ಮಾಪುರ ಅವರಿಗೆ ಯಾವುದೇ ಅಧಿಕಾರವಿರಲಿ, ಇಲ್ಲದಿರಲಿ ಕ್ಷೇತ್ರ ಜನತೆ ಸದಾ ತಿಮ್ಮಾಪುರ ಅವರ ಬೆಂಬಲಕ್ಕೆ ನಿಲ್ಲಲ್ಲಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ನ್ಯಾಯ ಒದಗಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದರು.


ಕೆಎಂಎಫ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಮಠದ, ಕೃಷ್ಣಾ ಜಟ್ಟೆನ್ನವರ, ಹೊಳಬಸು ದಂಡಿನ, ಎಪಿಎಂಸಿ ನಿರ್ದೇಶಕರಾದ ಪಾಂಡು ಹುವಣ್ಣವರ, ವೆಂಕಟೇಶ ಅಂಕಲಗಿ, ಅಯ್ಯಪ್ಪಗೌಡ ಪಾಟೀಲ, ಅಬ್ದುಲ್ ರೆಹೆಮಾನ್ ತೊರಗಲ್, ರವಿ ರೊಡ್ಡಪ್ಪನವರ, ಮಹೇಶ ಮಳಲಿ, ಲೋಕಣ್ಣಾ ಉಳ್ಳಾಗಡ್ಡಿ, ಮುತ್ತಪ್ಪ ಚೌಧರಿ, ಸಾಗರ ಸತ್ತಿಗೇರಿ, ಗೋಪಾಲಗೌಡ ಪಾಟೀಲ, ಕುಲದೀಪ ಅರಕೇರಿ, ಸಚೀನ ಮುಳ್ಳೂರ, ದುರ್ಗಪ್ಪ ಕಾಳಮ್ಮನವರ, ಕೆ.ಕೆ.ಭಾಗವಾನ, ಶಿವಯೋಗಿ ಗಂಗಣ್ಣವರ, ಭೀಮಶಿ ನಾವಲಗಿ, ಶಬ್ಬೀರ ಗುಳೇದಗಡ್ಡ, ಜಾವೇದ ಮುಧೋಳ, ವಿಠ್ಠಲ ಆನೆಗುದ್ದಿ, ಸುರೇಶ ಪೂಜಾರ, ಶಂಕ್ರೆಪ್ಪ ಪೂಜಾರ, ರೇಖಾ ಪಾಟೀಲ, ಹನಮವ್ವ ಈರಣ್ಣವರ, ಸಿಂಧೂರ ಆನೆಗುದ್ದಿ, ಪರಸಪ್ಪ ಪರಸಣ್ಣವರ ಮತ್ತು ಕಾರ್ಯಕರ್ತರು ಇದ್ದರು.

ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆರ್.ಬಿ.ತಿಮ್ಮಾಪುರ ಅವರಿಗೆ ತಕ್ಷಣವೇ ಸೂಕ್ತ ಸ್ಥಾನಮಾನ ಹಾಗೂ ಸಚಿವ ಸ್ಥಾನ ನೀಡಬೇಕು, ವರಿಷ್ಠರು ಈ ಬಗ್ಗೆ ಮರುಪರೀಶಿಲನೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.-ಗುರುರಾಜ ಉದಪುಡಿ, ಕಾಂಗ್ರೆಸ್ ಯುವ ಮುಖಂಡ