ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಏರಿ ದರ್ಶನ ಪಡೆಯಬೇಕೆಂಬ 90 ವರ್ಷದ ಅಜ್ಜಿಯ ಕನಸನ್ನು ಮೊಮ್ಮಗ ನನಸು ಮಾಡಿದ್ದಾನೆ. ವಿಜಯನಗರ ಜಿಲ್ಲೆಯ ಅಜೇಯ ಎನ್ನುವ ಯುವಕ ಶುಕ್ರವಾರ ಸಂಜೆ ತನ್ನ ಅಜ್ಜಿಯನ್ನು ಹೊತ್ತುಕೊಂಡು ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಏರಿ, ಆಂಜನೇಯಸ್ವಾಮಿಯ ದರ್ಶನ ಮಾಡಿಸಿದ್ದಾನೆ.
ಹಲವಾರು ವರ್ಷಗಳಿಂದ ಅಂಜನಾದ್ರಿಯ ಆಂಜನೇಯಸ್ವಾಮಿ ದರ್ಶನ ಮಾಡಬೇಕೆಂಬ ಸಂಕಲ್ಪ ಮಾಡಿದ್ದ ಅಜ್ಜಿಯ ಕನಸನ್ನು ಮೊಮ್ಮಗ ಈಡೇರಿಸಿದ್ದರಿಂದ ಅಜ್ಜಿ, ಇಂದು ನಾನು ಪಾವನಳಾದೆ ಎಂದು ಆಂಜನೇಯಸ್ವಾಮಿ ಮುಂದೆ ನಿಂತು ಧನ್ಯತೆ ವ್ಯಕ್ತಪಡಿಸಿದಳು..ಬಿಸಿಲಿನ ಧಗೆಯಲ್ಲಿ ಅಜ್ಜಿಯನ್ನು ಹೊತ್ತುಕೊಂಡು ಮೆಟ್ಟಿಲಿನ ಮಧ್ಯದಲ್ಲಿರುವ ಗಿಡ-ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಾ ಅಜ್ಜಿಗೆ ಬಾಯಾರಿಕೆಯಾದಾಗ ನೀರು ಕುಡಿಸುತ್ತಾ ಮೆಟ್ಟಿಲು ಹತ್ತಿದ್ದಾನೆ.
ವಿವಿಧ ರಾಜ್ಯಗಳಿಂದ ನಿತ್ಯ ವೃದ್ಧರು ಬಹಳಷ್ಟು ಭಕ್ತರು ಆಗಮಿಸುತ್ತಿದ್ದಾರೆ. ಅವರಿಗೆ ಅಂಜನಾದ್ರಿಗೆ ಹೋಗದೆ ದೂರದಿಂದ ಕೈಮುಗಿದು ಭಕ್ತಿ ಸಮರ್ಪಿಸುತ್ತಾರೆ. ದೂರದಿಂದ ಬಂದ ಭಕ್ತರಿಗೆ ಅಂಜನಾದ್ರಿಯ ಆಂಜನೇಯಸ್ವಾಮಿ ದರ್ಶನ ಪಡೆಯಬೇಕೆಂಬ ಹಂಬಲ ಇರುತ್ತದೆ. ಕಾರಣ ಸರ್ಕಾರ ಕೂಡಲೆ ರೋಪ್‌ವೇ ನಿರ್ಮಾಣವಾಗಲಿ ಎಂದು ಭಕ್ತರು ಒತ್ತಾಯಿಸಿದ್ದಾರೆ.