ಕುಕನೂರು: ನೂತನ ರಥ ನಿರ್ಮಾಣಕ್ಕೆ ಆಶೀರ್ವಾದವನ್ನು ಶಿರಹಟ್ಟಿ ಫಕೀರ ಶ್ರೀ ಹಾಗೂ ಕುಕನೂರಿನ ಮಹಾದೇವ ಶ್ರೀ ಮಾಡಿದರು. ಅವರ ಆಶೀರ್ವಾದ ಹಾಗೂ ಭೀಮಾಂಬೆ ಕೃಪೆ ಮತ್ತು ಭಟಪ್ಪನಹಳ್ಳಿ ಗ್ರಾಮಸ್ಥರು ಭಕ್ತಿಯ ಪ್ರತಿರೂಪವೇ ನೂತನ ರಥ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಡಾ.ಎಚ್.ಡಿ.ಪಾಟೀಲ್ ಹೇಳಿದರು. ತಾಲೂಕಿನ ಭಟಪ್ಪನಹಳ್ಳಿಯಲ್ಲಿ ಶನಿವಾರ ಜರುಗಿದ ಶ್ರೀಭೀಮಾಂಬಿಕಾದೇವಿ ಜಾತ್ರಾಮಹೋತ್ಸವ, 11 ಜೋಡಿ ಸಾಮೂಹಿಕ ವಿವಾಹ ಹಾಗೂ ನೂತನ ಪಂಚಕಳಸ ರಥದ ಲೋಕಾರ್ಪಣೆ ಹಾಗೂ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವರ್ಷ ಜಾತ್ರೆಯಲ್ಲಿ ಗ್ರಾಮಸ್ಥರು ರಥ ನಿರ್ಮಿಸುವ ಸಂಕಲ್ಪ ತೊಟ್ಟು. ನೂತನ ರಥ ನಿರ್ಮಾಣಕ್ಕೆ ಪ್ರತಿ ಅಮಾವಾಸ್ಯೆ ಗ್ರಾಮದಲ್ಲಿ ಶಿವಾನುಭವ ಗೋಷ್ಠಿ ಸಹ ಮಾಡಿದೇವು. ಭೀಮಾಂಬೆಯ ಆಶೀರ್ವಾದದಿಂದ ಗ್ರಾಮಕ್ಕೆ ₹ 25 ಲಕ್ಷ ವೆಚ್ಚದ ನೂತನ ರಥ ಸಹ ಆಗಿದೆ. ಅಲ್ಲದೆ ರಥ ನಿಲ್ಲಿಸುವ ಮನೆ ಸಹ ನಿರ್ಮಾಣವಾಗಿದೆ. ಧರ್ಮ ದೇವತೆಯನ್ನು ಆರಾಧನೆ ಮಾಡುತ್ತಾ ಗ್ರಾಮದಲ್ಲಿ ನಿತ್ಯ ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಣೆ ಮಾಡಲಾಗುತ್ತದೆ. ಧರ್ಮದ ಹಾದಿಯಲ್ಲಿ ಸಾಗಿದರೆ ತಾಯಿ ಭೀಮವ್ವ ಇಷ್ಠಾರ್ಥ ನೆರವೇರಿಸುತ್ತಾಳೆ. ಕಳೆದ 9 ತಿಂಗಳುಗಳಿಂದ ನೂತನ ರಥ ನಿರ್ಮಾಣಕ್ಕೆ ಗ್ರಾಮದ ಮುಖಂಡರು ಶ್ರಮಿಸಿದ್ದಾರೆ. ದೇವಿಯ ಅನುಗ್ರಹ ಹಾಗೂ ಗ್ರಾಮಸ್ಥರ ಸಹಕಾರ ಅಪಾರವಾಗಿದೆ ಎಂದರು.

ಶಿರಹಟ್ಟಿ ಸಂಸ್ಥಾನಮಠದ ಫಕೀರಸ್ವಾಮೀಜಿ ಮಾತನಾಡಿ, ಕಳೆದ ವರ್ಷ ನಿಮ್ಮೂರಿಗೆ ರಥ ಮಾಡಿ ಎಂದು ಹೇಳಿದ ತಕ್ಷಣವೇ ಗ್ರಾಮಸ್ಥರು ಭಕ್ತಿ ಪೂರ್ವಕವಾಗಿ ₹12 ಲಕ್ಷ ವಾಗ್ದಾನ ಮಾಡಿದ್ದರು.ಇದು ಗ್ರಾಮದಲ್ಲಿ ನೆಲಸಿರುವ ಭೀಮಾಂಬೆಯ ಅನುಗ್ರಹ. ಗ್ರಾಮದಲ್ಲಿ ಒಗ್ಗಟ್ಟು ಮುಖ್ಯ. ಎಲ್ಲರೂ ಒಂದಾಗಿ ಬಂಧುಗಳಾಗಿ ಚಂದವಾಗಿ ರಥ ಎಳೆಯುವುದೇ ಜಾತ್ರೆ. ಪ್ರೀತಿಯಿಂದ ಕಂಡರೆ ಸ್ವರ್ಗ, ತಮ್ಮಿಚ್ಚೇಯಂತೆ ನಡೆದರೆ ನರಕ. ಕಾಡು ಪ್ರಾಣಿಗಳು ಕಾಡಿನಲ್ಲಿದ್ದರೆ, ಕಾಡುವ ಪ್ರಾಣಿಗಳು ಎಲ್ಲ ಕಡೆ ಇರುತ್ತವೆ. ಹಾಗೇ ಮನುಷ್ಯ ಎಂದಿಗೂ ಕಾಡುವ ಪ್ರಾಣಿಯಾಗಬಾರದು. ಎಲ್ಲರನ್ನೂ ಪ್ರೀತಿಯಿಂದ ಕಂಡು ಸ್ವರ್ಗದಾರಿಯಾಗಬೇಕು ಎಂದರು.

ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಮಾತನಾಡಿ,ಭಟಪ್ಪನಹಳ್ಳಿ ಗ್ರಾಮಸ್ಥರು ಧರ್ಮವಂತರು. ಹಾಗಾಗಿ ಧರ್ಮ ದೇವತೆಯ ಆಶೀರ್ವಾದ ಅವರಿಗಿದೆ. ಮನುಷ್ಯ ಮತ, ಧರ್ಮ ಪಥದಲ್ಲಿ ಇಲ್ಲಿಯ ಜನರು ಸಾಗುತ್ತಿದ್ದಾರೆ ಎಂದರು.

ಮಂಗಳೂರಿನ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಇಟಗಿಯ ಧರ್ಮಮಠದ ಶ್ರೀ ಹನುಮಂತಪ್ಪ ಅಜ್ಜ, ಭೀಮಾಂಬಿಕಾದೇವಿ ಸೇವಾ ಸಮಿತಿ ಅಧ್ಯಕ್ಷ ರಾಜಶೇಖರ ಕರಮುಡಿ, ವೀರಯ್ಯ ಭದ್ರಾಪೂರ, ಮಲ್ಲಪ್ಪ ಗುಡಿಹಿಂದಲ್, ಮಲ್ಲಿಕಾರ್ಜುನ ಕರಮುಡಿ, ರಾಮಚಂದ್ರಪ್ಪ ಜೋಗೀನ್, ಡಾ. ಸುರೇಶ ದೇಸಾಯಿ, ಶರಣಪ್ಪ, ಹಂಚ್ಯಾಳಪ್ಪ ಕಲ್ಗೂಡಿ, ಶ್ರೀಧರ ಹೊಸಮನಿ, ಪುರಾಣ ಪ್ರವಚನಕಾರ ಕಲ್ಲಯ್ಯ ಶಾಸ್ತ್ರೀ ಕಲ್ಲೂರು ಇತರರಿದ್ದರು.