ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ರೈತರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಹಾಲಿನ ದರವನ್ನು ೮ ರು. ಏರಿಕೆ ಮಾಡಿ, ಡೇರಿಗೆ ಹಾಲು ಸರಬರಾಜು ಮಾಡುವ ರೈತರಿಗೆ ೭ ರೂ. ನೀಡಿ, ಒಕ್ಕೂಟಗಳಿಗೆ ೧ ರು.ನೀಡಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ತಾಲೂಕಿನ ಬಸವನಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ಹೊರೆಯಾಗಿರಬಹುದು. ಆದರೆ, ಹೆಚ್ಚಿನ ಪಾಲು ರೈತರಿಗೆ ಅನುಕೂಲವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಪ್ರಗತಿಗೆ ಎಲ್ಲರು ಚಿಂತನೆ ಮಾಡಬೇಕು ಎಂದು ಹೇಳಿದರು.
ನಾನು ಸಹ ಪಶು ಸಂಗೋಪನಾ ಸಚಿವನಾಗಿ ಸಂಪುಟ ಸಭೆಯ ಚರ್ಚೆಯಲ್ಲಿದ್ದೆ. ೭ ರು. ಏರಿಕೆ ಪ್ರಸ್ತಾಪವಾಗಿತ್ತು. ಆದರೆ, ರೈತರಿಗೆ ಬರ ಪರಿಸ್ಥಿತಿಯಿಂದ ಹೈನುಗಾರಿಕೆಯನ್ನು ಮಾಡಲು ಕಷ್ಟವಾಗಿದೆ. ೮ ರೂ.ಗಳನ್ನು ಏರಿಕೆ ಮಾಡಲೇಬೇಕು ಎಂದು ಒತ್ತಾಯ ಮಾಡಿದೆ. ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ರೈತರ ಪರವಾದ ತೀರ್ಮಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಚಾಮುಲ್ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ೩.೬೨ ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಬಹುಪಾಲು ಹಾಲು ಹೊರ ರಾಜ್ಯಗಳಿಗೆ ಖರೀದಿಯಾಗುತ್ತಿದೆ. ಗುಣಮಟ್ಟದ ಹಾಲು ನೀಡುವುದರಿಂದ ಒಕ್ಕೂಟಕ್ಕೆ ಹೆಚ್ಚಿನ ಲಾಭವಾಗುತ್ತಿದೆ. ರೈತರು ಗುಣಮಟ್ಟದ ಹಾಲು ನೀಡಿ ಬೆಲೆ ಏರಿಕೆಯ ಲಾಭ ಹಾಗೂ ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್ಗೆ ೫೦ ರು.ಗಳವರೆಗೂ ಪಡೆದುಕೊಳ್ಳಲು ಅವಕಾಶವಿದೆ ಎಂದರು
ಬಸವನಪುರ ಚಿಕ್ಕ ಗ್ರಾಮವಾಗಿದ್ದು, ೮೮೦ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಅವರ ಒತ್ತಾಸೆಯಿಂದ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಗ್ರಾಮದಲ್ಲಿರುವ ಬಹುಪಾಲು ರೈತರು ಹೈನುಗಾರಿಕೆಯನ್ನು ಅವಲಂಭಿಸಿದ್ದಾರೆ. ಹೀಗಾಗಿ ಇನ್ನು ಹೆಚ್ಚಿನ ಹಾಲು ಶೇಖರಣೆಯಾಗಲಿ. ಡೇರಿಗೆ ಗೋದಾಮು ನಿರ್ಮಾಣಕ್ಕೆ ಅನುದಾನ ನೀಡುವ ಜತೆಗೆ ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ, ಕನಕ ಹಾಗೂ ಅದಿಜಾಂಬವರ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುದಾನ ನೀಡುವುದಾಗಿ ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.
ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀಟರ್ಗೆ ೮ ರೂ. ಹೆಚ್ಚಳ ಮಾಡಿ, ರೈತರ ಪರವಾದ ನಿಲುವು ಹೊಂದಿದೆ. ಒಕ್ಕೂಟದ ಅಧ್ಯಕ್ಷನಾಗಿ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರನ್ನು ಅಭಿನಂದಿಸುತ್ತೇನೆ ಎಂದರು.
ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ವ್ಯವಸ್ಥಾಪಕ ನಿರ್ದೇಶಕ ಕೆ.ಸಿ. ಡಾ. ಶ್ರೀಧರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜು, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಶರತ್ಕುಮಾರ್, ಉಪ ವ್ಯವಸ್ಥಾಪಕ ಡಾ. ಅಮರ್, ಸಹಾಯಕ ವ್ಯವಸ್ಥಾಪಕಿ ಕೆ. ಮಂಜುಳ, ಮಾರ್ಗ ವಿಸ್ತರಣಾಧಿಕಾರಿ ಎಚ್.ಜಿ. ಲಕ್ಷ್ಮಿ, ಸಂಘದ ಉಪಾಧ್ಯಕ್ಷ ಮಂಜುನಾಥಸ್ವಾಮಿ, ನಿರ್ದೇಶಕರಾದ ಬಿ.ಎಂ.ಕುಮಾರ್, ಮಹದೇವಸ್ವಾಮಿ, ಬಿ.ಸಿ.ಮಹದೇವಸ್ವಾಮಿ, ಎಸ್.ಶಿವಮೂರ್ತಿ, ಬಿ.ಎಸ್.ಮಹದೇವಸ್ವಾಮಿ, ಎಲ್.ಮಹದೇವಸ್ವಾಮಿ, ಕುಮಾರ್, ಶಿವಮ್ಮ, ರಾಜಮ್ಮ, ಮುಖಂಡರಾದ ಬಸನಪುರ ರಾಜಶೇಖರ್, ಸಿಇಒ ಎಸ್.ಮಹದೇವಸ್ವಾಮಿ, ಎಂ.ಅಭಿಲಾಷ್, ಕೃಷ್ಣಯ್ಯ, ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.