ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಲಕ್ಷಾಂತರ ರು. ವೆಚ್ಚದಲ್ಲಿ ನವೀಕರಣಗೊಂಡಿದ್ದ ಪ್ರವಾಸಿ ಮಂದಿರದ ಹಳೇ ಸರ್ಕ್ಯೂಟ್ ಹೌಸ್‌ನಲ್ಲಿದ್ದ ಕಚೇರಿಯನ್ನು ಕೊನೆಗಳಿಗೆಯಲ್ಲಿ ಲೋಕೋಪಯೋಗಿ ಇಲಾಖೆ ವಾಪಸ್ ಪಡೆದ ವಿವಾದ ತಿಳಿಯಾಗಿದ್ದು ಭಾನುವಾರ ಅದೇ ಕಚೇರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಪ್ರವೇಶ ಮಾಡಿದರು.ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ ವಿ. ಸೋಮಣ್ಣರ ಕಚೇರಿಯನ್ನು ಭಾನುವಾರ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ವಿವಾದ ಸಂಬಂಧ ಕೇಂದ್ರ ಸಚಿವ ಸೋಮಣ್ಣ ಅವರು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರನ್ನು ಭೇಟಿ ಮಾಡಿ ಕಚೇರಿ ಆರಂಭಕ್ಕೆ ಅನುಮತಿ ಪಡೆದಿದ್ದರು.
ಶಾಸ್ತ್ರೋಕ್ತವಾಗಿ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಕಚೇರಿ ಒಳಗೆ ಇಡಲಾಗಿದ್ದ ಅಜ್ಜಯ್ಯನ ಫೋಟೋಗೆ ಸಚಿವ ಸೋಮಣ್ಣ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನೂತನ ಕಚೇರಿ ಆರಂಭಿಸಿದ ಸಚಿವ ಸೋಮಣ್ಣ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿತ್ತು.ಭವ್ಯ ಸ್ವಾಗತ: ಪ್ರವಾಸಿ ಮಂದಿರ ಆವರಣಕ್ಕೆ ಕೇಂದ್ರ ಸಚಿವ ಸೋಮಣ್ಣ ಆಗಮಿಸುತ್ತಿದ್ದಂತೆ ಮೈತ್ರಿ ಪಕ್ಷಗಳ ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರೆಯಿತು. ಮೈತ್ರಿಗಳ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರದ ಘೋಷಣೆಗಳನ್ನು ಕೂಗುತ್ತಾ ಸೋಮಣ್ಣಗೆ ಪುಷ್ಪವೃಷ್ಠಿ ಸುರಿಸಿ ಸಂಭ್ರಮಿಸಿದರು.
ತುಮಕೂರಿನ ಪ್ರವಾಸಿ ಮಂದಿರದ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನಸ್ತೋಮ ಸೇರಿರಲಿಲ್ಲ. ಕೇಂದ್ರ ಸಚಿವ ಸೋಮಣ್ಣ ನೂತನ ಕಚೇರಿ ಉದ್ಘಾಟನೆ ಹಾಗೂ ಜನಸಂಪರ್ಕ ಸಭೆ ಹಿನ್ನೆಲೆಯಲ್ಲಿ ಬೃಹತ್ ಜನಸ್ತೋಮದೊಂದಿಗೆ ಇಡೀ ಪ್ರವಾಸಿ ಮಂದಿರ ಕಳೆಗಟ್ಟಿತ್ತು. ಹಳೇ ಸರ್ಕ್ಯೂಟ್ ಹೌಸ್ ಸೋಮಣ್ಣರ ಕಚೇರಿಯಾಗಿ ಪರಿವರ್ತನೆಗೊಂಡಿರುವುದರಿಂದ ಇಡೀ ಪ್ರವಾಸಿ ಮಂದಿರ ನವವಧುವಿನಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ.ಜನಸಂಪರ್ಕ ಸಭೆ: ಕೇಂದ್ರ ಸಚಿವ ಸೋಮಣ್ಣ ಪ್ರವಾಸಿ ಮಂದಿರದಲ್ಲಿ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಮೊಟ್ಟ ಮೊದಲನೇ ಬಾರಿಗೆ ಜನಸಂಪರ್ಕ ಸಭೆಗೆ ಚಾಲನೆ ನೀಡಿದರು. ಭಾನುವಾರ ಮಧ್ಯಾಹ್ನ 1 ಗಂಟೆವರೆಗೆ ಜನಸಂಪರ್ಕ ಸಭೆ ನಡೆಸಿದ ಸಚಿವರು, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆಯಿಂದ ಆಗಮಿಸಿದ ಜನರ ಅಹವಾಲುಗಳನ್ನು ಆಲಿಸಿದರು. ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರಿಗೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ ಸಚಿವ ಸೋಮಣ್ಣ ಅವರು, ಸಂಬಂಧಪಟ್ಟ ಕ್ಷೇತ್ರಗಳ ಶಾಸಕರು ಹಾಗೂ ಅಧಿಕಾರಿಗಳಿಗೂ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.
ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಎಂ.ಟಿ. ಕೃಷ್ಣಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ಮಾಜಿ ಸಚಿವ ಬಿ. ನಾಗೇಶ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.