ಮಾಗಡಿ: ತಾಲೂಕಿನ ಸಾವನದುರ್ಗ ಇತಿಹಾಸಿ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹುಂಡಿ ಹಣವನ್ನು ದುರ್ಬಳಸಿಕೊಂಡಿರುವ ಇಒ ಜಗದೀಶ್ ಅಮಾನತಿಗೆ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯದಲ್ಲಿ ಮೂರು ತಿಂಗಳಿಗೊಮ್ಮೆ ಹುಂಡಿ ತೆರೆದು ಕಾಣಿಕೆ ಹಣವನ್ನು ದೇವಾಲಯದ ಬ್ಯಾಂಕಿನ ಖಾತೆಗೆ ಹಾಕಲಾಗುತ್ತಿತ್ತು. ಅದರಂತೆ ಕಳೆದ ತಿಂಗಳು ದೇವಾಲಯದ ಹುಂಡಿ ಎಣಿಕೆ ಮಾಡುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸದೆ ಇರುವುದು ಆರೋಪಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಸಾವನದುರ್ಗದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಎ ಗ್ರೇಡ್ ದರ್ಜೆಯಲ್ಲಿದ್ದು ಕಳೆದ ಎರಡು ವರ್ಷಗಳಿಂದ ಹುಂಡಿ ತೆರೆದಾಗ ಅಂದಾಜು 30ರಿಂದ 40 ಲಕ್ಷ ರು. ಸಂಗ್ರಹವಾಗುತ್ತಿತ್ತು. ಆದರೆ ಇಒ ಜಗದೀಶ್ ಬಂದ ಮೇಲೆ ಹುಂಡಿ ಹಣ ಹತ್ತು ಲಕ್ಷಕ್ಕೆ ಬಂದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಆಡಳಿತ ಮಂಡಳಿಯ ಸದಸ್ಯರು ಕಳೆದ ತಿಂಗಳ ಹುಂಡಿ ಹಣ ಎಣಿಕೆ ವೀಡಿಯೋ ಚಿತ್ರೀಕರಣದ ಹಾರ್ಡ್ ಡಿಸ್ಕ್ ಇಲ್ಲ ಎಂದು ಸಬೂಬು ನೀಡಿರುವುದು ಹಾಗೂ ಇಒ ಜಗದೀಶ್ ನಡವಳಿಕೆ ವಿರುದ್ಧ ಗ್ರಾಮಸ್ಥರು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದು, ಆತನನ್ನು ಮೇಲಧಿಕಾರಿಗಳು ಅಮಾನತುಗೊಳಿಸಿ ದುರ್ಬಳಸಿಕೊಂಡಿರುವ ಹಣ ಮತ್ತೆ ಸರ್ಕಾರಕ್ಕೆ ತಲುಪಿಸಬೇಕು ಎಂದು ಆಗ್ರಹಿಸಿದರು.ಸಮಿತಿ ಸದಸ್ಯೆ ಗೀತಾ ರಂಗನಾಥ್ ಮಾತನಾಡಿ, ದೇವಾಲಯದ ಹಣ ದುರುಪಯೋಗ ಪಡಿಸಿಕೊಂಡಿರುವ ಕಾರ್ಯ ನಿರ್ವಣಾಧಿಕಾರಿ ಕಳೆದ ಎರಡೂವರೆ ವರ್ಷಗಳಿಂದಲೂ ಇಲ್ಲಿ ಹುಂಡಿ ತೆರೆಯಲು ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದಿರುವ ಬಗ್ಗೆ ಗ್ರಾಮಸ್ಥರೆ ದೂರುತ್ತಿದ್ದಾರೆ. ಹಣ ದುರುಪಯೋಗದ ಬಗ್ಗೆ ಶಾಸಕ ಎಚ್.ಸಿ.ಬಾಲಕೃಷ್ಣ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆಂದರು.
ಗ್ರಾಮಸ್ಥರಾದ ನರಸಿಂಹಶೆಟ್ಟಿ, ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಹಾಜರಿದ್ದರು.ಇದೇ ವೇಳೆ ದೇವಸ್ಥಾನ ಸಿಬ್ಬಂದಿ ಹಾಗೂ ಭಕ್ತರು ಭಾಗವಹಿಸಿದ್ದರು.