ಮಂಗಳೂರು: ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಕುರಿತು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ತಿಳಿಸಿದ್ದಾರೆ.

ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರು ಈ ಮಣ್ಣಿನ ಸ್ವಾಭಿಮಾನ, ಶೌರ್ಯ, ಸಾಮಾಜಿಕ ನ್ಯಾಯ, ಸತ್ಯ ಹಾಗೂ ಧರ್ಮದ ಪ್ರತೀಕವಾಗಿದ್ದಾರೆ. ತುಳುನಾಡಿನ ಜನರ ಸಾಂಸ್ಕೃತಿಕ ಅಸ್ಮಿತೆಯೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಅವರ ಹೆಸರನ್ನು ಕರಾವಳಿಯ ಪ್ರಮುಖ ಹೆಬ್ಬಾಗಿಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವುದು ಈ ಭಾಗದ ಜನತೆಗೆ ಸಲ್ಲಿಸುವ ಗೌರವವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಬೇಡಿಕೆಗೆ ಸಂಬಂಧಿಸಿದಂತೆ ಸುದೀರ್ಘ ಹೋರಾಟ ನಡೆಸಿರುವುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ 2010ರ ಡಿ.10ರಂದು ಕೆಪಿಟಿ ವೃತ್ತದಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಬೃಹತ್ ‘ಪಂಜಿನ ಮೆರವಣಿಗೆ’ ನಡೆಸಿ, ವಿಮಾನ ನಿಲ್ದಾಣಕ್ಕೆ ಅಮರವೀರ ಕೋಟಿ–ಚೆನ್ನಯರ ಹೆಸರಿಡುವಂತೆ ಒತ್ತಾಯಿಸಲಾಗಿತ್ತು. ಈ ಹೋರಾಟಕ್ಕೆ ದಕ್ಷಿಣ ಕನ್ನಡದ ಸಮಸ್ತ ಜನತೆಯ ಬೆಂಬಲವಿದೆ ಎಂದು ಮನವಿಯಲ್ಲಿ ಹೇಳಲಾಗಿದೆ ಎಂದು ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.