ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಾಂತ್ರಿಕ ಮಾದರಿಗಳ ಪ್ರದರ್ಶನ ಕೌಶಲ್ಯಂ 2026ರ ಉದ್ಘಾಟನಾ ಸಮಾರಂಭ

ಮೂಡುಬಿದಿರೆ: ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುತ್ತಿರುವ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ರಾಜ್ಯದಲ್ಲೇ ಉತ್ತಮ ಪಾಲಿಟೆಕ್ನಿಕ್ ಆಗಿ ಗುರುತಿಸಿಕೊಂಡಿದೆ ಎಂದು ಮಾಜಿ ಸಚಿವ, ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹೇಳಿದರು.ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಾಂತ್ರಿಕ ಮಾದರಿಗಳ ಪ್ರದರ್ಶನ ಕೌಶಲ್ಯಂ 2026ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರದರ್ಶನವನ್ನು ಉದ್ಘಾಟಿಸಿದ ಮೂಡುಬಿದಿರೆ ಆರಕ್ಷಕ ಠಾಣೆಯ ವೃತ್ತನಿರೀಕ್ಷಕ ರಾಜೇಂದ್ರ ಬಿ. ಅವರು, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಚಟುವಟಿಕೆಗಳತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ ಮಾತನಾಡಿ, ಪ್ರಪಂಚದಾದ್ಯಂತ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯಗಳೊಂದಿಗೆ ಪಾರಂಪರಿಕ ಕೌಶಲ್ಯಗಳ ಕಡೆಗೂ ಗಮನಹರಿಸುವುದರಿಂದ ಮುಂದೆ ಉದ್ಯಮಿಗಳಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಶ್ರೀ ಮಹಾವೀರ ಕಾಲೇಜು ಟ್ರಸ್ಟ್‌ನ ಕಾರ್ಯದರ್ಶಿ ಡಾ. ರಾಧಾಕೃಷ್ಣ, ಆಡಳಿತ ಮಂಡಳಿ ಸದಸ್ಯರಾದ ಸಿ. ಎಚ್. ಅಬ್ದುಲ್ ಗಫೂರ್, ಜೆ. ಜೆ. ಪಿಂಟೊ ಉಪಸ್ಥಿತರಿದ್ದರು. ಪ್ರಾಂಶುಪಾಲೆ ನೊರೋನ್ಹಾ ತರೀನಾ ರೀಟಾ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಇನ್ನೊವೇಶನ್ ಸೆಲ್ ಸಂಚಾಲಕ ಡಾ. ಗುರುದಾಸ್ ಎಸ್. ಪಿ. ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಧನ್ಯವಾದ ಸಮರ್ಪಿಸಿದರು.

ತಾಂತ್ರಿಕ ಮಾದರಿ ಪ್ರದರ್ಶನ: ಏಳು ವಿಭಾಗಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು 110 ವಿಭಿನ್ನ ಹಾಗೂ ವೈವಿಧ್ಯಮಯ ತಾಂತ್ರಿಕ ಮಾದರಿಗಳನ್ನು ಪ್ರದರ್ಶಿಸಿದರು. ಆಸುಪಾಸಿನ ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿದರು.

ಆಟೊಮೊಬೈಲ್ ವಿಭಾಗದ ಕೃಷಿ ಚಟುವಟಿಕೆಗಳಿಗೆ ಉಪಯುಕ್ತ ವಾಹನ, ಸಿವಿಲ್ ವಿಭಾಗದ ರಬ್ಬರೀಕೃತ ಕಾಂಕ್ರೀಟ್, ಕಂಪ್ಯೂಟರ್ ಸೈನ್ಸ್ ವಿಭಾಗದ ಕ್ಯೂಆರ್ ಕೋಡ್ ಮೂಲಕ ಪತ್ತೆಹಚ್ಚುವ ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಕೃತಕ ಬುದ್ಧಿಮತ್ತೆಯ ರೊಬೊಟ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯುತ್ ಪ್ರಸರಣ ಲೈನ್‌ಗಳಲ್ಲಿ ಉಂಟಾದ ದೋಷಗಳನ್ನು ಪತ್ತೆಹಚ್ಚುವ ತಂತ್ರಜ್ಞಾನ, ಮೆಕೆಟ್ರಾನಿಕ್ಸ್ ವಿಭಾಗದ ಸ್ಮಾರ್ಟ್ ಡಸ್ಟರ್ ಹಾಗೂ ಮೆಕ್ಯಾನಿಕಲ್ ವಿಭಾಗದ ಒಂದೇ ಶಕ್ತಿಮೂಲ ಬಳಸಿ ಹಲವು ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಿರ್ವಹಿಸುವ ತಂತ್ರಜ್ಞಾನವು ವಿವಿಧ ವಿಭಾಗಗಳ ಶ್ರೇಷ್ಠ ತಾಂತ್ರಿಕ ಮಾದರಿಗಳಾಗಿ ಆಯ್ಕೆಯಾದವು.

ಅತಿಹೆಚ್ಚು ನಾವೀನ್ಯತೆಯ ತಾಂತ್ರಿಕ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ ವಿಭಾಗೀಯ ಕ್ಲಬ್‌ಗಳಿಗೆ ನೀಡುವ ‘ಬೆಸ್ಟ್ ಇನ್ನೊವೇಟಿವ್ ಕ್ಲಬ್ ಆಫ್ ದಿ ಇಯರ್’ ಪ್ರಶಸ್ತಿ ಮೆಕ್ಯಾನಿಕಲ್ ವಿಭಾಗದ ಯಂತ್ರ ಕ್ಲಬ್ ಹಾಗೂ ಮೆಕೆಟ್ರಾನಿಕ್ಸ್ ವಿಭಾಗದ ಎಂ.ಟಿ.ಎಕ್ಸ್. ಕ್ಲಬ್‌ಗಳ ಪಾಲಾಯಿತು.

ಮೈಟ್ ಕಾಲೇಜಿನ ರೊಬೊಟಿಕ್ಸ್ ಹಾಗೂ ಆರ್ಟಿಫಿಶಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥ ಡಾ. ರಾಮಲಿಂಗಮ್ ಹಾಗೂ ಬೊಂದೆಲ್‌ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಆಯ್ಕೆ ಶ್ರೇಣಿ ಉಪನ್ಯಾಸಕ ಡಾ. ಸತೀಶ ಕೆ. ಎಂ. ನಿರ್ಣಾಯಕರಾಗಿ ಸಹಕರಿಸಿದರು.