ಶಾಸಕ ದರ್ಶನ್‌ಗೆ ತಿಳಿವಳಿಕೆ ಕೊರತೆಯಿದೆ: ಮಾಜಿ ಶಾಸಕ ಬಿ.ಹರ್ಷವರ್ಧನ್‌

| Published : Jan 26 2024, 01:46 AM IST

ಶಾಸಕ ದರ್ಶನ್‌ಗೆ ತಿಳಿವಳಿಕೆ ಕೊರತೆಯಿದೆ: ಮಾಜಿ ಶಾಸಕ ಬಿ.ಹರ್ಷವರ್ಧನ್‌
Share this Article
  • FB
  • TW
  • Linkdin
  • Email

ಸಾರಾಂಶ

ಪುರಾತತ್ವ ಇಲಾಖೆಯ ಆಯುಕ್ತರು ಸ್ಥಳ ಮಹಜರು ಮಾಡಿ 75 ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಬಳಿಕ ಲೋಕೋಪಯೋಗಿ ಇಲಾಖೆ ನೀಲಿನಕ್ಷೆ ಸಿದ್ಧಪಡಿಸಿತು. ಪುರಾತತ್ವ ಇಲಾಖೆ ಅನುಮತಿ ಹಾಗೂ ಲೋಕೋಪಯೋಗಿ ಇಲಾಖೆ ನಕ್ಷೆ ಸಿದ್ಧಪಡಿಸಿದ ಮೇಲಷ್ಟೇ ಕಳೆದ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ಅನುಮೋದನೆ ದೊರೆತಿದೆ. ಅಂದಾಜು 16.52 ಕೋಟಿ ವೆಚ್ಚದಲ್ಲಿ 75 ಕೊಠಡಿಗಳ ಅತಿಥಿಗೃಹ, 8 ಕೊಠಡಿಗಳ ಡಾರ್ಮೆಟರಿ ಹಾಗೂ 6 ವಿಐಪಿ ಕೊಠಡಿಗಳ ಕಟ್ಟಡ ನಿರ್ಮಾಣಕ್ಕೆಶಿಲಾನ್ಯಾಸ ನೆರವೇರಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡುಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 75 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ಈಗಾಗಲೇ ಕ್ಯಾಬಿನೆಟ್ ಅನುಮೋದನೆ ದೊರೆತಿದ್ದು, ಆಡಳಿತಾತ್ಮಕ ಮಂಜೂರಾತಿ ಪಡೆದು ಕಾಮಗಾರಿ ಕೈಗೆತ್ತುಕೊಳ್ಳುವ ಬದಲು ಅತಿಥಿಗೃಹ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ತಿಳಿವಳಿಕೆ ಕೊರತೆಯಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಕಿಡಿಕಾರಿದರು.

ಹುಣ್ಣಿಮೆ ಅಂಗವಾಗಿ ಗುರುವಾರ ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರು ಫುಟ್‌ ಪಾತ್‌ ನಲ್ಲಿ ಮಲಗಿರುವುದನ್ನು ನಾನು ಖುದ್ದು ಗಮನಿಸಿದ್ದೇನೆ. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ಭಕ್ತರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬಹುಕಾಲದ ಬೇಡಿಕೆಯಾಗಿದ್ದ ಬೆಳ್ಳಿರಥ ನಿರ್ಮಾಣ ಮಾಡಲು ನಾನು ಎಷ್ಟು ಶ್ರಮ ಹಾಕಿದ್ದೇನೆ ಎಂಬುದು ನನಗೆ ಗೊತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಎರಡು ಯೋಜನೆಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಎದುರಾದ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಡಕುಗಳನ್ನು ನಿವಾರಣೆ ಮಾಡಲು ಸಾಕಷ್ಟು ಶ್ರಮವಹಿಸಿದ್ದೇನೆ. ಪುರಾತತ್ವ ಇಲಾಖೆಯ ಆಯುಕ್ತರು ಸ್ಥಳ ಮಹಜರು ಮಾಡಿ 75 ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಬಳಿಕ ಲೋಕೋಪಯೋಗಿ ಇಲಾಖೆ ನೀಲಿನಕ್ಷೆ ಸಿದ್ಧಪಡಿಸಿತು. ಪುರಾತತ್ವ ಇಲಾಖೆ ಅನುಮತಿ ಹಾಗೂ ಲೋಕೋಪಯೋಗಿ ಇಲಾಖೆ ನಕ್ಷೆ ಸಿದ್ಧಪಡಿಸಿದ ಮೇಲಷ್ಟೇ ಕಳೆದ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ಅನುಮೋದನೆ ದೊರೆತಿದೆ. ಅಂದಾಜು 16.52 ಕೋಟಿ ವೆಚ್ಚದಲ್ಲಿ 75 ಕೊಠಡಿಗಳ ಅತಿಥಿಗೃಹ, 8 ಕೊಠಡಿಗಳ ಡಾರ್ಮೆಟರಿ ಹಾಗೂ 6 ವಿಐಪಿ ಕೊಠಡಿಗಳ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರ್ಕಾರದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ಅನುಮೋದನೆ ನೀಡುವ ಜತೆಗೆ ಖುದ್ದು ಅವರೇ ಬಂದು ಶಿಲಾನ್ಯಾಸ ನೆರವೇರಿಸಿದ್ದರು.

ಇದೀಗ ಶಾಸಕ ದರ್ಶನ್ ಧ್ರುವನಾರಾಯಣ ಅವರು ದೇವಾಲಯದ ಆವರಣದಲ್ಲಿ ಜಾಗದ ಕೊರತೆ ಇರುವುದರಿಂದ ಅತಿಥಿಗೃಹ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಬಾಲಿಶ ಹೇಳಿಕೆ ನೀಡಿರುವುದು ದೇವಾಲಯದ ಅಭಿವೃದ್ಧಿ ಬಗ್ಗೆ ಅವರಿಗಿರುವ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎಂದು ಜರಿದರು.

ಈಗಿರುವ ಹಾಲಿ ಕಟ್ಟಡಗಳನ್ನು ನವೀಕರಣ ಮಾಡಿ ಅವುಗಳನ್ನೇ ಭಕ್ತರಿಗೆ ನೀಡಬೇಕೆಂದು ನಿರ್ಧರಿಸಿರುವುದಾಗಿ ಶಾಸಕರು ಹೇಳಿದ್ದಾರೆ. ಇವರ ಹೇಳಿಕೆ ಮುದುಕಿಗೆ ಶೃಂಗಾರ ಮಾಡಿದಂತಾಗುತ್ತದೆ. ನಾನು ಶಾಸಕನಾಗಿದ್ದ ವೇಳೆ ಗಿರಿಜ ಕಲ್ಯಾಣ ಮಂಟಪ ಜೀರ್ಣೋದ್ಧಾರಕ್ಕೆ ಎರಡು ಬಾರಿ ಅನುದಾನ ಕೊಟ್ಟಿದ್ದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಹಳೇ ಕಟ್ಟಡಗಳನ್ನು ಭಕ್ತರಿಗೆ ಸಮರ್ಪಕವಾಗಿ ನೀಡಲು ಸಾಧ್ಯವಾಗಿಲ್ಲ. ಈಗಿರುವ ಕೊಠಡಿಗಳ ಜತೆಗೆ ಹೊಸ ಅತಿಥಿಗೃಹ ನಿರ್ಮಾಣವಾದರೆ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಕನಿಷ್ಠ ಪರಿಜ್ಞಾನವಿಲ್ಲದೇ ಯೋಜನೆಗೆ ತಿಲಾಂಜಲಿ ಎರಚುವ ಶಾಸಕರ ನಡೆ ಸರಿಯಲ್ಲ.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಇವರ ತಂದೆ ದಿವಂಗತ ಆರ್. ಧ್ರುವನಾರಾಯಣ ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಕೀಯ ಮಾಡದೇ ರಾಜಿ ಆಗುತ್ತಿದ್ದರು. ಇವರೂ ಅವರ ಹಾದಿಯಲ್ಲೇ ಸಾಗಲಿ. ದೊಡ್ಡಜಾತ್ರೆ ವೇಳೆಗೆ ಸಮರ್ಪಣೆಗೊಳ್ಳಲಿರುವ ಬೆಳ್ಳಿರಥವನ್ನು ಇವರೇ ಲೋಕಾರ್ಪಣೆ ಮಾಡಲಿ. ಅಂತೆಯೇ 75 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಿ ಇವರೇ ಉದ್ಘಾಟಿಸಲಿ. ನನಗೆ ಖಂಡಿತ ಬೇಸರವಿಲ್ಲ. ಒಟ್ಟಾರೆ ಭಕ್ತರಿಗೆ ನೆರವಾಗಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ:

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ನರಕಾಸುರ ವಧೆ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಉತ್ಸವ ಮೂರ್ತಿಗಳಿಗೆ ಅಪಚಾರ ಎಸಗಿರುವ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಿಲ್ಲ. ಘಟನೆ ಕುರಿತು ಶಾಸಕರು ಬಹಿರಂಗವಾಗಿ ಮಾತನಾಡದೇ ಇರುವುದು ಪರೋಕ್ಷವಾಗಿ ತಪ್ಪಿತಸ್ಥರನ್ನು ರಕ್ಷಣೆಗೆ ನಿಂತಿದ್ದಾರೆ ಎಂದು ತಿಳಿಯಬೇಕಾಗುತ್ತದೆ. ಘಟನೆ ಬಳಿಕ ದೇವಾಲಯದ ಅರ್ಚಕರಿಗೆ ಸಾಂತ್ವನ ಹೇಳಲು ಶಾಸಕರಿಗೆ ಆಗಿಲ್ಲ. ನಂಜನಗೂಡು ಬಂದ್ ಆಚರಿಸಿ 20 ದಿನ ಕಳೆದರೂ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಬಂಧಿಸದೇ ಇರುವುದು ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತಿದೆ ಎಂದು ಹರ್ಷವರ್ಧನ್ ಹರಿಹಾಯ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಪಿ. ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯ್ಕ ಇದ್ದರು.