7ನೇ ವೇತನ ಆಯೋಗ ಜಾರಿ ಮಾಡದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

| Published : Jan 26 2024, 01:46 AM IST

ಸಾರಾಂಶ

ಸರ್ಕಾರ ೭ ನೇ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿದೆ. ಮುಂಬರುವ ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ೭ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸರ್ಕಾರ ೭ ನೇ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿದೆ. ಮುಂಬರುವ ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ೭ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿಯ ಸರ್ಕಾರಿ ನೌಕರರ ಸಂಘದ ಕಟ್ಟಡದ ಮೇಲೆ ನಿರ್ಮಿಸಲು ಉದ್ದೇಶಿಸಿರುವ ಸುಮಾರು ೧೫ ಲಕ್ಷ ರು. ವೆಚ್ಚದ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸುಮಾರು ೨೦ ಲಕ್ಷ ರು. ವರೆಗೆ ಉಚಿತ ಆರೋಗ್ಯ ವಿಮೆ ನೀಡಬೇಕು. ಖಾಲಿ ಇರುವ ಸುಮಾರು ೨.೫ ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ೭ ನೇ ವೇತನದ ಶಿಫಾರಸ್ಸನ್ನು ಜಾರಿಗೊಳಿಸಬೇಕು ಹಾಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂಬ ನಮ್ಮ ಬೇಡಿಕೆಯನ್ನು ಈಡೇರಿಸಲಿದೆ ಎಂಬ ಆಶಾಭಾವನೆ ಇದೆ ಎಂದು ಷಡಕ್ಷರಿ ಹೇಳಿದರು.

ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಿ ನೌಕರರ ಬೇಡಿಕೆಗಳು ಜಾರಿಗೆ ಬಂದಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ೧೦೩ ವರ್ಷಗಳ ಇತಿಹಾಸವಿದೆ. ನಮ್ಮ ಸಂಘ ಶೇಕಡಾ ನೂರರಷ್ಟು ಸದಸ್ಯತ್ವ ಹೊಂದಿದ ಏಕೈಕ ಸಂಘಟನೆ. ಅಲ್ಲದೇ, ದೇಶದಲ್ಲೇ ಅತ್ಯುತ್ತಮ ಸಂಘ ಎಂಬ ಹಿರಿಮೆಯನ್ನೂ ಪಡೆದಿದೆ ಎಂದು ಷಡಕ್ಷರಿ ತಿಳಿಸಿದರು.

ಹಲವಾರು ವರ್ಷಗಳಿಂದ ಬಾಕಿಯಿರುವ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಷಡಕ್ಷರಿ ಹೇಳಿದರು.

ಸರ್ಕಾರಿ ನೌಕರರ ಹಲವು ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನವನ್ನು ನೀಡದೇ ತಾರತಮ್ಯ ಮಾಡಲಾಗುತ್ತಿದೆ. ಇಬ್ಬರೂ ಸಹ ಒಂದೆ ಅವಧಿಯವರೆಗೆ ಕರ್ತವ್ಯ ಮಾಡುತ್ತಾರೆ. ಸಮಾನ ಕೆಲಸ ಸಮಾನ ವೇತನ ನೀಡಬೇಕು. ಈ ತಾರತಮ್ಯ ಸರಿಯಲ್ಲ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ದೃಷ್ಟಿಯಿಂದ ಇಲ್ಲ ಸಲ್ಲದ ಗ್ಯಾರಂಟಿಗಳನ್ನು ಷೋಷಿಸಿ ಪೇಚಿಗೆ ಸಿಲುಕಿದೆ. ಅಭಿವೃದ್ಧಿಗೆ ಹಣವಿಲ್ಲದಾಗಿದೆ. ಲೋಕಸಭಾ ಚುನಾವಣೆಯವರೆಗೂ ಈ ಗ್ಯಾರಂಟಿ ಯೋಜನೆ ಜಾರಿಗೆ ಇರುತ್ತದೆ. ಮೇ ತಿಂಗಳ ನಂತರ ಗ್ಯಾರಂಟಿ ಯೋಜನೆ ಕಳೆದುಹೋಗುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಭವಿಷ್ಯ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ದುಂಡ ಬಸವರಾಜು ಮಾತನಾಡಿದರು.

ರಾಜ್ಯಕಾರ್‍ಯಕಾರಿಣಿ ಸಮಿತಿಯ ಆನೇಕೆರೆ ಹರ್ಷ, ರಾಜ್ಯ ಖಜಾಂಚಿ ತಿಮ್ಮೇಗೌಡ, ರಾಜ್ಯ ಕಾರ್‍ಯದರ್ಶಿ ಡಾ.ನಲ್ಕುಂದ್ರಿ ಸದಾನಂದ, ತಾಲೂಕು ಸಂಘದ ಕಾರ್ಯದರ್ಶಿ ನಟೇಶ್, ಖಜಾಂಚಿ ನಾಗರಾಜು, ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಸುಧಾಕರ್, ಬಿ.ಇ.ಒ ಸೋಮಶೇಖರ್, ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.