ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲು ರಾಜ್ಯ ಸರ್ಕಾರದಿಂದ 14 ವಿಶೇಷ ಬಸ್‌ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿರುವುದು ದಾಖಲೆಯಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲು ರಾಜ್ಯ ಸರ್ಕಾರದಿಂದ 14 ವಿಶೇಷ ಬಸ್‌ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿರುವುದು ದಾಖಲೆಯಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಸ್ಥಳೀಯ ಬಸ್ ನಿಲ್ದಾಣದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶಾಸಕರ ಅನುದಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ‘ವಿದ್ಯಾರ್ಥಿ ರಥ’ ವಿಶೇಷ ಬಸ್ ಸೌಕರ್ಯ ಒದಗಿಸಿದ್ದಕ್ಕಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಶಾಸಕರ ಸಂವಾದ ಮತ್ತು ನೂತನ ಬಸ್‌ ಗಳಿಗೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ತಾವೇ ರೂಪಿಸಿ ಕೊಳ್ಳಬೇಕು. ಕಷ್ಟಪಟ್ಟು ಶಿಕ್ಷಣ ಕೊಡಿಸುವ ತಂದೆ-ತಾಯಿಯರ ಕನಸು ಈಡೇರಿಸಬೇಕೇ ಹೊರತು ಅವರಿಗೆ ಭಾರ ಆಗಬಾರದು ಎಂದು ಹೇಳಿದರು.

ಈ 14 ಬಸ್‌ಗಳು ಶಾಲಾ-ಕಾಲೇಜುಗಳ ಅವಧಿಗೆ ಅನುಗುಣವಾಗಿ ಸಂಚರಿಸಲಿದ್ದು, ಇದರ ಸದುಪಯೋಗ ಮತ್ತು ರಕ್ಷಣೆ ವಿದ್ಯಾರ್ಥಿಗಳ ಜವಾಬ್ದಾರಿ. ಪ್ರತಿನಿತ್ಯ ಶಾಲಾ-ಕಾಲೇಜಿಗೆ ಬರುವ ಮೂಲಕ ಶೇ.75 ರಷ್ಟು ಹಾಜರಾತಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ವಿದ್ಯಾರ್ಥಿಗಳ ಹಾಜರಾತಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಕುರಿತು ತಾವು ಸಹ ಮೇಲ್ವಿಚಾರಣೆ ನಡೆಸುತ್ತೇನೆ. ಅಕ್ಷರವಂತರು ಮತ್ತು ಗುಣವಂತರಾದರೆ ಸಮಾಜವೂ ಪರಿವರ್ತನೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಆಕ್ಸ್‌ಫರ್ಡ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತನಾ ಶಿವಜ್ಯೋತಿ ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ಗಳ ವಿದ್ಯಾರ್ಥಿನಿಯರು 3 ಕಿ.ಮೀ ನಡೆದುಕೊಂಡೇ ಕಾಲೇಜಿಗೆ ಬರುವಂತಾಗಿದೆ. ಹೀಗಾಗಿ ಬಸ್ ಸಂಚಾರ ಕಲ್ಪಿಸಿ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.

ವಿಜಡಮ್ ಕಾಲೇಜಿನ ವಿದ್ಯಾರ್ಥಿನಿ ಅಲ್ಪಿಯಾ ರೌಡಕುಂದಾ, ಎಲ್ಬಿಕೆ ಕಾಲೇಜಿನ ವಿದ್ಯಾರ್ಥಿನಿ ಹನುಮಂತಿ ಗಾಂಧಿನಗರ, ಎಕ್ಸ್‌ಲೆಂಟ್ ಕಾಲೇಜಿನ ವಿದ್ಯಾರ್ಥಿನಿ ಮೌನಿಕಾ ಬಪ್ಪೂರು, ಆದಿತ್ಯ ಕಾಲೇಜು ವಿದ್ಯಾರ್ಥಿ ಪ್ರಕಾಶ, ವಿಜಡಮ್ ಕಾಲೇಜಿ ವಿದ್ಯಾರ್ಥಿ ಬಸವರಾಜ ಮಾಡಶಿರವಾರ ಅನಿಸಿಕೆ ವ್ಯಕ್ತಪಡಿಸಿ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಸಂವಾದ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಡಿಪೋ ವ್ಯವಸ್ಥಾಪಕ ಹೊನ್ನಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ರಾಯಚೂರು ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ನ ಸದಸ್ಯ ಸತ್ಯನಾರಾಯಣ ಶ್ರೇಷ್ಠಿ, ಆರ್.ಅನಿಲಕುಮಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಎನ್.ಸತೀಶ್, ಸರ್ಕಲ್ ಇನ್ಸ್ಪೆಕ್ಟರ್ ವೀರಾರೆಡ್ಡಿ ಎಚ್ ಉಪಸ್ಥಿತರಿದ್ದರು. ಪರಶುರಾಮ ಮಲ್ಲಾಪುರ ನಿರೂಪಿಸಿದರು.