೩೮ ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಬಿಎಸ್ ಉಷಾದೇವಿಯವರಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಶಿರಾ

ಅಂಗನವಾಡಿ ಶಿಕ್ಷಕಿ ಎಂದರೆ ಗ್ರಾಮದ ಮೊದಲ ಶಿಕ್ಷಕಿ. ವಿದ್ಯಾವಂತ ಸಮಾಜ ನಿರ್ಮಾಣ ಮಾಡಲು ಅಡಿಪಾಯ ನಿರ್ಮಿಸಿದ ನಿರ್ಮಾತೃ. ನಾವು ಪ್ರಾಥಮಿಕ ಪ್ರೌಢಶಾಲೆ ಪದವಿ ಶಿಕ್ಷಣ ಮುಗಿಸಿ ಬಂದರೂ ಸಹ ಅಂಗನವಾಡಿಗಳಲ್ಲಿ ಕಲಿತ ಹಾಡು, ಪದ್ಯಗಳು ನಮ್ಮ ಜೀವನದ ಕೊನೆಯವರೆಗೆ ಉಳಿಯುತ್ತದೆ ವಿದ್ಯಾರ್ಥಿ ಜೀವನದ ಮೊದಲ ಪಾಠಶಾಲೆಯೇ ಅಂಗನವಾಡಿ ಕೇಂದ್ರಗಳು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ಆರ್ ಮಂಜುನಾಥ್ ಹೇಳಿದರು.

ಅವರು ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಜಾನಕಲ್ ಗ್ರಾಮದಲ್ಲಿ ೩೮ ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಬಿಎಸ್ ಉಷಾದೇವಿಯವರಿಗೆ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಶಾಲೆಗಳು ಬಂದು ಕೆಜಿ, ಫ್ರೀ ನರ್ಸರಿ ಅಂತಹ ಶಾಲೆಗಳು ಆರಂಭವಾಗಿ ಅಂಗನವಾಡಿಗಳು ಕಳೆಗುಂದುತ್ತಿವೆ. ಆದರೆ ನಮ್ಮ ಕಾಲದಲ್ಲಿ ೭೦ರಿಂದ ೮೦ ಮಕ್ಕಳು ಒಂದು ಅಂಗನವಾಡಿ ಕೇಂದ್ರದಲ್ಲಿಯೇ ಬೆಳೆಯುತ್ತಿದ್ದವು.ಅವರ ಸಹಿಷ್ಣತಾ ಶಕ್ತಿ ಎಷ್ಟಿತ್ತು ಎಂಬುದು ನಾವೆಲ್ಲರೂ ಅರಿಯಬೇಕಿದೆ. ಇಂತಹ ಸಾರ್ಥಕ ಜೀವನವನ್ನು ನಡೆಸಿದ ಉಷಾ ದೇವಿಯವರು ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಅವರ ಕೈಕೆಳಗೆ ಬೆಳೆದ ಎಷ್ಟೋ ಜನ ಮಕ್ಕಳು ಇಂದು ಅಧಿಕಾರಿಗಳಾಗಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಅವರೆಲ್ಲರೂ ಸಹ ಇಂದಿಗೂ ಸಹ ನಮ್ಮ ಟೀಚರ್ ಎಂಬ ಅಭಿಮಾನ ಹೊಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಿಡಿಪಿಓ ಹರಿಪ್ರಸಾದ್, ಬುಕ್ಕಾಪಟ್ಟಣ ಗ್ರಾ.ಪಂ ಅಧ್ಯಕ್ಷ ಮುಜಾಹಿದ್, ಜಾನಕಲ್ ಸಹಿಪ್ರಾಶಾಲೆ ಮುಖ್ಯ ಶಿಕ್ಷಕ ನಾರಾಯಣಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜು, ಸಹ ಶಿಕ್ಷಕ ಜಯಣ್ಣ, ಗ್ರಾಮಸ್ಥರಾದ ಭರತ್ ಗೌಡ, ದಯಾನಂದ, ಕಾಂತರಾಜು, ಶ್ರೀನಿವಾಸ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.