ಸಾರಾಂಶ
ಶಾಸಕ ಎಚ್.ಪಿ. ಸ್ವರೂಪ್ ಸೋಮವಾರ ಕುಟುಂಬ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆದರು. ಜಿಲ್ಲಾಡಳಿತ ನಿಗದಿಪಡಿಸಿದ ಪ್ರೋಟೋಕಾಲ್ ವಾಹನದಲ್ಲೇ ಅವರು ದೇವಾಲಯಕ್ಕೆ ಆಗಮಿಸಿದ್ದು, ನಿಯಮಾನುಸಾರ ದೇವಿಯ ದರ್ಶನ ಪಡೆದು ಭಕ್ತಿಯ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಭಕ್ತರ ಸುಗಮ ಧರ್ಮದರ್ಶನಕ್ಕಾಗಿ ಗೋಲ್ಡ್ ಕಾರ್ಡ್ ವ್ಯವಸ್ಥೆ, ಭದ್ರತಾ ಕ್ರಮಗಳು, ಕುಡಿಯುವ ನೀರು, ವೈದ್ಯಕೀಯ ಸಹಾಯ ಸೇರಿದಂತೆ ಎಲ್ಲ ವ್ಯವಸ್ಥೆಗಳು ಶಿಸ್ತುಬದ್ಧವಾಗಿ ನಡೆದಿವೆ ಎಂದರು.
ಹಾಸನ: ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಸೋಮವಾರ ಕುಟುಂಬ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆದರು. ಜಿಲ್ಲಾಡಳಿತ ನಿಗದಿಪಡಿಸಿದ ಪ್ರೋಟೋಕಾಲ್ ವಾಹನದಲ್ಲೇ ಅವರು ದೇವಾಲಯಕ್ಕೆ ಆಗಮಿಸಿದ್ದು, ನಿಯಮಾನುಸಾರ ದೇವಿಯ ದರ್ಶನ ಪಡೆದು ಭಕ್ತಿಯ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
ದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಈ ವರ್ಷ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಜಿಲ್ಲಾಡಳಿತ ಅತ್ಯುತ್ತಮ ವ್ಯವಸ್ಥೆ ಮಾಡಿಕೊಂಡಿದೆ. ಭಕ್ತರ ಸುಗಮ ಧರ್ಮದರ್ಶನಕ್ಕಾಗಿ ಗೋಲ್ಡ್ ಕಾರ್ಡ್ ವ್ಯವಸ್ಥೆ, ಭದ್ರತಾ ಕ್ರಮಗಳು, ಕುಡಿಯುವ ನೀರು, ವೈದ್ಯಕೀಯ ಸಹಾಯ ಸೇರಿದಂತೆ ಎಲ್ಲ ವ್ಯವಸ್ಥೆಗಳು ಶಿಸ್ತುಬದ್ಧವಾಗಿ ನಡೆದಿವೆ. ಭಕ್ತರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಪ್ರತಿ ವರ್ಷವೂ ನಾವು ಕುಟುಂಬ ಸಮೇತ ಹಾಸನಾಂಬೆಯ ಆಶೀರ್ವಾದ ಪಡೆಯುತ್ತೇವೆ. ಈ ವರ್ಷವೂ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ನಿಗದಿಯಾದ ಸಮಯದಲ್ಲಿ ಬಂದು ದರ್ಶನ ಪಡೆದಿದ್ದೇವೆ ಎಂದರು. ನಮ್ಮ ತಂದೆ ಎಚ್.ಎಸ್. ಪ್ರಕಾಶ್, ಹಾಗೂ ಅಟ್ಟವರ ರಾಮದಾಸ್ ಅವರು ಹಾಸನಾಂಬೆ ದೇವಾಲಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಕಾಲದಲ್ಲಿ ದೇವಾಲಯ ಚಿಕ್ಕದಾಗಿದ್ದರೂ, ಈಗ ಅದು ಭವ್ಯ ರೂಪ ಪಡೆದಿದೆ. ಹೊಸ ಗೋಪುರ, ದೇವಾಲಯದ ವಿಸ್ತರಣೆ, ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ಇಂದು ಎಲ್ಲರಿಗೂ ಹೆಮ್ಮೆ ಉಂಟುಮಾಡುವಂತಿವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ದೇವಿಯ ಸೇವೆಗೆ ನನ್ನ ತಂದೆ ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಂಡಾಗ ಹೃದಯ ತುಂಬಿ ಬರುತ್ತದೆ. ಹಾಸನಾಂಬೆ ದೇವಿ ಹಾಸನ ಜಿಲ್ಲೆಯ ರಕ್ಷಣಾ ದೈವ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ದೇವಿಯ ಆಶೀರ್ವಾದದಿಂದ ಜಿಲ್ಲೆ ಶಾಂತಿ, ಸಮೃದ್ಧಿಯ ದಾರಿಯಲ್ಲಿ ಸಾಗುತ್ತಿದೆ. ಹಾಸನಾಂಬೆಯ ಪಾದಸ್ಪರ್ಶದಿಂದ ಈ ಭೂಮಿ ಪವಿತ್ರವಾಗಿದೆ,” ಎಂದು ಹೇಳಿದರು.ಹಾಸನಾಂಬೆ ದೇವಿಯ ದರ್ಶನದ ವೇಳೆ ಶಾಸಕರ ಪತ್ನಿ, ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು. ದೇವಸ್ಥಾನ ಪ್ರಾಂಗಣದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರು, ಮತ್ತು ಭಕ್ತರು ಉಪಸ್ಥಿತರಿದ್ದರು. ಶಾಸಕರ ಸರಳ ಧೋರಣೆ, ಶಿಸ್ತಿನ ಪಾಲನೆ ಹಾಗೂ ದೇವಿಯ ಮೇಲಿನ ನಂಬಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.