ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಿವೃತ್ತ ಎಂಜಿನಿಯರ್ ರಮೇಶ್ ಕುಮಾರ್ ಎಂಬುವವರು ಒತ್ತುವರಿ ತೆರವು ಎಂಬ ನೆಪದಲ್ಲಿ ನನ್ನ ಖಾಸಗಿ ಜಮೀನಿಗೆ ಅನಧಿಕೃತ ಪ್ರವೇಶ ಮಾಡಿ, ಬೆಳೆಗಳು ಹಾಗೂ ಮರಗಳನ್ನು ಹಾಳು ಮಾಡಲಾಗಿದೆ ಎಂದು ಆಲೂರು ತಾಲೂಕಿನ ಕುಂದೂರು ಹೋಬಳಿಯ ಕದಾಳು ಗ್ರಾಮದ ರೈತ ಮಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ನನಗೆ ಸರ್ವೇ ನಂ. ೬೭/೪ರಲ್ಲಿ ೧೭ ಗುಂಟೆ ಜಮೀನು ಇದೆ. ಇದರಲ್ಲಿ ರಮೇಶ್ ಕುಮಾರ್ ಅವರು ರಸ್ತೆ ಒತ್ತುವರಿ ತೆರವು ಎಂಬ ನೆಪದಲ್ಲಿ ಹಾನಿ ಮಾಡಿದ್ದಾರೆ. ತಹಸೀಲ್ದಾರರಿಂದ ಈ ಬಗ್ಗೆ ಆದೇಶವಿದೆ ಎಂದು ಹೇಳುತ್ತಿದ್ದರು. ಆದರೆ ನಾನು ಕೇಳಿದಾಗ ಯಾರೂ ಆದೇಶದ ನಕಲು ನೀಡುತ್ತಿಲ್ಲ. ತಾಲೂಕು ಕಚೇರಿಯವರು ಅಲೆದಾಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ನನ್ನ ಜಮೀನಿನಲ್ಲಿದ್ದ ೩೦ಕ್ಕೂ ಹೆಚ್ಚು ತೇಗದ ಮರಗಳು, ಶುಂಠಿ ಬೆಳೆ ಹಾಗೂ ತಂತಿ ಕಂಬಳನ್ನು ನಾಶ ಮಾಡಲಾಗಿದೆ. ಪೊಲೀಸರು, ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರೂ ಸ್ಪಂದನೆ ಇಲ್ಲ. ತಹಸೀಲ್ದಾರರು, ಕಂದಾಯ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿ ಎಲ್ಲರೂ ಒಂದೇ ಗುಂಪಾಗಿ ನಿವೃತ್ತ ಎಂಜಿನಿಯರ್ ಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಶಂಕೆ ನಮಗೆ ಇದೆ. ಲಂಚ ಹಾಗೂ ಬಿರಿಯಾನಿ ಊಟಕ್ಕೆ ಮೋಸ ಹೋಗಿರುವ ಅಧಿಕಾರಿಗಳು ನನ್ನ ಜಮೀನಿನ ಮಣ್ಣನ್ನೇ ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು. ನನಗೆ ನ್ಯಾಯ ಸಿಗುತ್ತಿಲ್ಲ, ಅಧಿಕಾರಿಗಳ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಮೇಲಾಧಿಕಾರಿಗಳು ಕೂಡಲೇ ಈ ವಿಚಾರದಲ್ಲಿ ತನಿಖೆ ನಡೆಸಿ, ನನ್ನ ಹಾನಿಗೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡು, ನ್ಯಾಯ ನೀಡಬೇಕು ಎಂದು ರೈತ ಮಂಜೇಗೌಡ ಮನವಿ ಮಾಡಿದರು.