ಕನ್ನಡಪ್ರಭ ವಾರ್ತೆ ಕೋಲಾರಅಂಬೇಡ್ಕರ್ ಪ್ರತಿಪಾದಿಸಿದ ಮಾನವ ಹಕ್ಕುಗಳು, ವಾಕ್ ಸ್ವಾತಂತ್ರ್ಯ ರಕ್ಷಣೆ ಜತೆಗೆ ಸಂಶೋಧನೆ, ಸತ್ಯದ ಅಡಿಯಲ್ಲಿ ನಿಷ್ಪಕ್ಷಪಾತ ಸುದ್ದಿ ನೀಡುವ ಬದ್ಧತೆ ಪತ್ರಿಕಾರಂಗಕ್ಕೆ ಇರಬೇಕೆ ಹೊರತು ಹೇಳಿಕೆಗಳ ಸಾಮ್ರಾಜ್ಯವಾಗಬಾರದು ಎಂದು ಹಿರಿಯ ಪತ್ರಕರ್ತ, ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.ಕೋಲಾರ-ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದಿಂದ ನಡೆದ ಅಂಬೇಡ್ಕರ್ ೧೩೫ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಕುರಿತ ವಿಚಾರ ಸಂಕಿರಣ, ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ದಲಿತ ಹೋರಾಟಗಾರ ಸಿ.ಎಂ. ಮುನಿಯಪ್ಪರನ್ನು ಸನ್ಮಾನಿಸಿ ಮತನಾಡಿದರು.ಗಾಂಧಿ, ಅಂಬೇಡ್ಕರ್ ಪತ್ರಿಕೆಗಳಿಗೆ ವ್ಯತ್ಯಾಸವಿದೆ. ಗಾಂಧಿ ಹರಿಜನ ಪತ್ರಿಕೆಯಲ್ಲಿ ದೇಶದ ಸಂಸ್ಕೃತಿಯ ಕುರಿತು ಬರೆದರೆ ಅಂಬೇಡ್ಕರ್ ಶೋಷಿತರ ನೋವು, ಬವಣೆಯನ್ನು ಬರೆಯುತ್ತಿದ್ದರು. ಅಸ್ಪೃಶ್ಯತೆ ತುಂಬಿದ್ದ ವೇಳೆ ಅಂಬೇಡ್ಕರ್ ಪತ್ರಕರ್ತರಾಗಿ ಎದುರಿಸಿದ ಸವಾಲುಗಳು ಅಪಾರ. ಅವರು ತಮ್ಮ ಚಿಂತನೆಗಳನ್ನು ಶೋಷಿತರಿಗೆ ತಲುಪಿಸಲು ಅನಕ್ಷರತೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆ ನಡೆಸುವುದು ಸುಲಭದ ಮಾತಾಗಿರಲಿಲ್ಲ ಎಂದು ಶಿವಶಂಕರ್ ಹೇಳಿದರು.
ಆದರೆ ಇಂದು ಕಾರ್ಪೋರೇಟ್ ಕಂಪನಿಗಳ ಅಡಿ ಪತ್ರಿಕೋದ್ಯಮ ಕೊನೆಯ ಮೊಳೆ ಹೊಡೆಸಿಕೊಳ್ಳುವ ಹಂತ ತಲುಪಿದೆ. ಜಾಹೀರಾತು ಪತ್ರಿಕೋದ್ಯಮವಾಗಿ ನಿಷ್ಪಕ್ಷವಾದ ವರದಿಗಳಿಗೆ ಬರವಾಗಿದೆ ಎಂದು ಅವರು ವಿಷಾದಿಸಿದರು.೧ ಲಕ್ಷ ರು. ದತ್ತಿನಿಧಿ:ಪತ್ರಕರ್ತರಾಗಿದ್ದ ಗಾಂಧಿ, ಅಂಬೇಡ್ಕರ್ ಫೋಟೋ ಪತ್ರಕರ್ತರ ಸಂಘಗಳಲ್ಲಿ ಹಾಕಬೇಕು ಎಂದು ಸಲಹೆ ನೀಡಿದ ಅವರು, ಇದೇ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘ ಪ್ರತಿವರ್ಷ ಅಂಬೇಡ್ಕರ್ ಜಯಂತಿ ನಡೆಸಿ ಒಬ್ಬ ಸಾಧಕರಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ೧ ಲಕ್ಷ ರು. ದತ್ತಿನಿಧಿ ತಾವೇ ನೀಡುವುದಾಗಿ ಘೋಷಿಸಿ, ಅಂಬೇಡ್ಕರ್ ಪ್ರಶಸ್ತಿ ಸಿ.ಎಂ. ಮುನಿಯಪ್ಪರಿಗೆ ಬಂದಿದ್ದು, ಸೂಕ್ತ ವ್ಯಕ್ತಿಗೆ ಸಿಕ್ಕಂತಾಗಿದೆ, ತಮ್ಮ ಹೋರಾಟದ ಮೂಲಕ ಸಮಾಜಕ್ಕೆ ಬದುಕು ಮುಡಿಪಾಗಿಟ್ಟ ಅವರಿಗೆ ಸಂದಿದ್ದು ಸಂತಸ ಎಂದರು.
ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಪತ್ರಕರ್ತರ ಸಂಘಕ್ಕೆ ನೀಡಿದ ಸುಂದರವಾದ ಅಂಬೇಡ್ಕರ್ ಭಾವಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದರು. ರಾಜ್ಯ ಸರ್ಕಾರದ ಡಾ. ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ದಲಿತ ಹೋರಾಟಗಾರ ಹಾಗೂ ಪತ್ರಕರ್ತ ಸಿ.ಎಂ. ಮುನಿಯಪ್ಪರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್, ರಾಜ್ಯ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಜಿಲ್ಲಾ ವಾರ್ತಾಧಿಕಾರಿ ಡಾ.ಕವನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ರಾಜ್ಯಕಾರ್ಯಕಾರಿ ಸದಸ್ಯ ವಿ. ಮುನಿರಾಜು, ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಎಚ್.ಎನ್. ಮುರಳೀಧರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ಬಾಬಾ ಇದ್ದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ರಾಜೇಂದ್ರ ಸಿಂಹ ಸ್ವಾಗತಿಸಿ, ಉಪಾಧ್ಯಕ್ಷ ರವಿಕುಮಾರ್ ವಂದಿಸಿದರು. ಕೊಂಡರಾಜನಹಳ್ಳಿ ಮಂಜುಳಾ ಸೌಹಾರ್ದತೆ ಗೀತೆ ಹಾಡಿದರು. ಮಾನವೀಯ ವರದಿ, ತನಿಖಾ ವರದಿ ಇಂದು ಮಾಯ: ಪ್ರಭಾಕರ್ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಪೂರಕವಾಗಿ ಇಂದು ಪತ್ರಿಕೋದ್ಯಮ ಕೆಲಸ ಮಾಡುತ್ತಿಲ್ಲ, ಮಾನವೀಯ ವರದಿಗಳು, ತನಿಖಾ ವರದಿಗಳು ಇಂದು ಮಾಯವಾಗಿದೆ ಎಂದು ವಿಷಾದಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲು ಆಸರೆಯಾಗಿರಬೇಕಾದ ಪತ್ರಿಕಾ ರಂಗ ಇಂದು ವಾಣಿಜ್ಯೀಕರಣಗೊಂಡಿದೆ, ಭಾವನಾತ್ಮಕತೆ ಮರೆಯಾಗಿದೆ, ಇನ್ನಾದರೂ ಪತ್ರಕರ್ತರಿಗೆ ಅಂಬೇಡ್ಕರ್ ಮಾರ್ಗದರ್ಶನವಾಗಲಿ ಎಂದು ಅವರು ಆಶಿಸಿದರು.