ಮೂರು ದಿನಗಳ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾರನಗೆರೆ ಸಂಗಮೇಶ್

ಕನ್ನಡಪ್ರಭ ವಾರ್ತೆ ತಿಪಟೂರು

೧೨ನೇ ಶತಮಾನದಲ್ಲಿ ಸಾಮಾಜಿಕ ಅಸಮತೋಲನವನ್ನು ನಿವಾರಿಸಲು ಬಸವಣ್ಣನವರು ವಚನ ಕ್ರಾಂತಿಯ ಮೂಲಕ ಅನುಭವ ಮಂಟಪವನ್ನು ಸ್ಥಾಪಿಸಿ ಮಹತ್ವದ ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದರು. ಇದೇ ರೀತಿ ಸಾಣೇಹಳ್ಳಿಯ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಶರಣರ ವಚನಗಳು, ಪಂಥಗಳು ಮತ್ತು ಆಶಯಗಳನ್ನು ರಾಜ್ಯದ ಉದ್ದಗಲಕ್ಕೂ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಕಲ್ಪತರು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮಾರನಗೆರೆ ಸಂಗಮೇಶ್ ತಿಳಿಸಿದರು.ನಗರದ ಬಯಲು ಮಂದಿರದಲ್ಲಿ ಸೋಮವಾರ ರಾತ್ರಿ ತಾಲೂಕಿನ ಬಸವ ಅಭಿಮಾನಿ ಬಳಗ ಹಾಗೂ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಶಿವ ಸಂಚಾರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವಿಶೇಷವಾಗಿ ಯುವಜನತೆಗೆ ನಾಟಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಉತ್ಸವಗಳು ವೇದಿಕೆಯಾಗುತ್ತವೆ ಎಂದು ಹೇಳಿದರು.ಮಾದಿಹಳ್ಳಿಯ ದಯಾನಂದ ಮಾತನಾಡಿ, ಬಸವಣ್ಣನವರು ಕಾಯಕದ ಮೂಲಕ ದೇವರನ್ನು ಕಾಣಬೇಕೆಂಬ ಸಂದೇಶ ನೀಡಿದ್ದು, ವಿವಿಧ ರೀತಿಯ ಸಾಮಾಜಿಕ ಸುಧಾರಣೆಗಳನ್ನು ಮಾಡಿದ ಕ್ರಾಂತಿವೀರರು ಎಂದರು.ಗೌಡನಕಟ್ಟೆ ನಿಜಗುಣ ಮಾತನಾಡಿ, ಶರಣ ಸಂಸ್ಕೃತಿಯನ್ನು ಬಿತ್ತರಿಸುವ ಉದ್ದೇಶದಿಂದ ಹಾಗೂ ಜಾನಪದ ಕಲೆಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ವಚನಗಳ ಆಶಯದಂತೆ ನಾವು ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಹೇಳಿದರು.ನಾಟಕೋತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಿರಿಯ ಕಲಾವಿದರಾದ ಶಿವರುದ್ರಪ್ಪ ರಂಗಾಪುರ, ಕರೀಕೆರೆ ಕಿರಣ್, ಸಿದ್ದರಾಮಪಾಳ್ಯದ ಕುಮಾರಸ್ವಾಮಿ ಹಾಗೂ ಸಪ್ತಶ್ರೀ ಕಲಾ ಸಂಘದ ಬಸವರಾಜು ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನೇಗೌಡ, ಅಪ್ಪೇಗೌಡ, ಮಾದಿಹಳ್ಳಿ ರೇಣು, ತೇಜಮೂರ್ತಿ, ಚಂದ್ರಯ್ಯ, ಹರಿಸಮುದ್ರಗಂಗಾಧರ್, ಮಾರನಗೆರೆ ಚಿಕ್ಕಣ್ಣ, ಸಾರ್ಥವಳ್ಳಿ ಶಿವಕುಮಾರ್ ಸೇರಿದಂತೆ ಅನೇಕ ಪ್ರೋತ್ಸಾಹಕರು ಭಾಗವಹಿಸಿದ್ದರು.ಪೋಟೋ ೨-ಟಿಪಿಟಿ೧ ರಲ್ಲಿ ಕಳುಹಿಸಿದೆ.