ಸಾರಾಂಶ
ಹೊಳೆನರಸೀಪುರ : ನಮ್ಮ ದೇಶ ಉಳಿಯಬೇಕಾದರೆ ಮೋದಿಯವರು ಪ್ರಧಾನ ಮಂತ್ರಿ ಆಗಬೇಕು. ಶ್ರೀ ಲಕ್ಷ್ಮೀನರಸಿಂಹ ಇರುವವರೆಗೂ ನಮಗೇನು ತೊಂದರೆಯಿಲ್ಲ, ಮೂರು ಕ್ಷೇತ್ರ ಗೆಲ್ಲುತ್ತೇವೆ ಎಂದು ಶಾಸಕ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಶಾಸಕರ ಜತೆಗೂಡಿ ಖುದ್ದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿದ್ದೇವೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರು ಹೆಚ್ಚು ಒತ್ತು ಕೊಟ್ಟಿದ್ದಾರೆ. 1600 ಪ್ರೌಢಶಾಲೆ, 600 ಪಿಯು ಕಾಲೇಜು, ೨೫೦ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿದ್ದಾರೆ. ಜತೆಗೆ ಏಳೆಂಟು ಸಾವಿರ ಕೋಟಿ ರು. ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಕೊಟ್ಟಿದ್ದಾರೆ. 4800 ಶಿಕ್ಷಕರು, 1600 ಪಿಯು ಕಾಲೇಜಿನ ಉಪನ್ಯಾಸಕರನ್ನು ಕುಮಾರಸ್ವಾಮಿ, ಯಡಿಯೂರಪ್ಪ ಇದ್ದಾಗ ನೇಮಕ ಮಾಡಿದ್ದಾರೆ. ಈಗ ಜೆಡಿಎಸ್-ಬಿಜೆಪಿ ಸೇರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಿಸುತ್ತಿದ್ದೇವೆ, ನಮ್ಮ ಪಕ್ಷದ ಅಭ್ಯರ್ಥಿ ವಿವೇಕಾನಂದ ಗೆದ್ದೇ ಗೆಲ್ಲುತ್ತಾರೆ’ ಎಂದು ನುಡಿದರು.
ಲೋಕಸಭೆ ಚುನಾವಣೋತ್ತರ ಸಮೀಕ್ಷೆ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಬಳಿಕ ಜೆಡಿಎಸ್ ಎರಡರಿಂದ ಮೂರು ಗೆಲವು ಸಾಧಿಸುತ್ತದೆ ಎಂದು ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿ, ‘ದೇವರಿದ್ದಾರೆ’ ಎಂದು ಪ್ರತಿಕ್ರಿಯಿಸಿದರು. ಬೇರೆ ಯಾವುದೇ ಪ್ರಶ್ನೆಗಳಿಗೆ ಅವಕಾಶವಾಗದಂತೆ ಕಾರಿನಲ್ಲಿ ತೆರಳಿದರು.