ಸಿ.ಟಿ. ರವಿಗೆ ಮೇಲ್ಮನೆ ಟಿಕೆಟ್‌ : ಬಿಜೆಪಿ ಕಾರ್ಯಕರ್ತರ ಹರ್ಷ

| Published : Jun 03 2024, 12:31 AM IST / Updated: Jun 03 2024, 12:07 PM IST

ಸಾರಾಂಶ

ಚಿಕ್ಕಮಗಳೂರು, ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಮೂವರು ಅಭ್ಯರ್ಥಿಗಳ ಹೆಸರನ್ನು ಭಾನುವಾರ ಪ್ರಕಟಿಸಿದೆ.

  ಚಿಕ್ಕಮಗಳೂರು : ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಮೂವರು ಅಭ್ಯರ್ಥಿಗಳ ಹೆಸರನ್ನು ಭಾನುವಾರ ಪ್ರಕಟಿಸಿದೆ.

ಇದು, ಜಿಲ್ಲೆಯ ಪಾಲಿಗೆ ಮಾತ್ರವಲ್ಲ, ರಾಜ್ಯದ ರಾಜಕಾರಣದಲ್ಲಿ ಅಶ್ಚರ್ಯ ಮೂಡಿಸಿದೆ. ಸಿ.ಟಿ. ರವಿ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿಯೇ ಇರಲಿಲ್ಲ. ದಿಢೀರ್‌ ಅಂತಿಮ ತೀರ್ಮಾನ ಪ್ರಕಟಗೊಂಡಿದೆ.

ಸಿ.ಟಿ. ರವಿ ಅವರಿಗೆ ಟಿಕೆಟ್‌ ಘೋಷಣೆ ಮಾಡುತ್ತಿದ್ದಂತೆ, ಅವರು ಮಧ್ಯಾಹ್ನ ಚಿಕ್ಕಮಗಳೂರಿಗೆ ಬೇಲೂರು ಮಾರ್ಗವಾಗಿ ಆಗಮಿಸಿದರು. ಹಿರೇಮಗಳೂರು ವೃತ್ತದ ಬಳಿ ಟಿ. ರಾಜಶೇಖರ್‌, ಕೇಶವ ಸೇರಿದಂತೆ ಪಕ್ಷದ ಮುಖಂಡರು ಪಟಾಕಿ ಸಿಡಿಸಿದರು. ಕೋಟೆ ವೃತ್ತದ ಬಳಿ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಮುಖಂಡರು ಸಭೆ ನಡೆಸಿದರು.

ಸದ್ದಿಲ್ಲದೆ ಟಿೆಕೇಟ್‌ ಪ್ರಕಟ

ಕಳೆದ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ. ರವಿ ಅವರು ಪರಾಭವಗೊಂಡರು. ನಂತರದಲ್ಲಿ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಗಳು ಕೈ ತಪ್ಪಿದವು. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್‌ ಕುಮಾರ್‌ ಕಟೀಲ್‌ ಅವರ ಅವಧಿ ಮುಗಿಯುತ್ತಿದ್ದಂತೆ ನೂತನ ಅಧ್ಯಕ್ಷರ ಪಟ್ಟಿಯಲ್ಲಿ ಸಿ.ಟಿ. ರವಿ ಹೆಸರು ಕೂಡ ಕೇಳಿ ಬಂದಿತ್ತು.

ಆದರೆ, ಆ ಸ್ಥಾನ ವಿಜಯೇಂದ್ರ ಅವರ ಪಾಲಾಗುತ್ತಿದ್ದಂತೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿ.ಟಿ. ರವಿ ಆಸಕ್ತಿ ತೋರಿದ್ದರು. ಅವರ ಮೊದಲ ಆಯ್ಕೆ ಬೆಂಗಳೂರು ಉತ್ತರ ಕ್ಷೇತ್ರವಾಗಿತ್ತು. ಅವರದೇ ಪಕ್ಷದ ನಾಯಕರು ರವಿ ಅವರು ಬೆಂಗಳೂರಿಗೆ ಬರದಂತೆ ತಡೆಯುವ ತಂತ್ರ ಮಾಡಿದರು. ಅದರಲ್ಲಿ ಅವರು ಯಶಸ್ವಿಯೂ ಆದರು.

ನಂತರದ ಅವರ ಆಯ್ಕೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿತ್ತು. ಹಾಲಿ ಶೋಭಾ ಕರಂದ್ಲಾಜೆ ಇದ್ದರಿಂದ ಅವರನ್ನು ಬದಲಾವಣೆ ಮಾಡುವುದು ಕಷ್ಟವಾಗಿದ್ದರಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗೋ ಬ್ಯಾಕ್‌ ಶೋಭಾ ಎಂದು ಪಟ್ಟು ಹಿಡಿದಿದ್ದರು. ಶೋಭಾ ಅವರಿಗೆ ಟಿಕೆಟ್‌ ಫೈನಲ್‌ ಆಗುತ್ತಿದ್ದಂತೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಆ ಸುದ್ದಿ ದೆಹಲಿಗೆ ತಲುಪುವಂತೆ ಮಾಡಿದ್ದರು. ಆಗ ವಿರೋಧದ ನೆಪವೊಡ್ಡಿ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಣೆ ಮಾಡಿತು. ಆದರೆ, ಸಿ.ಟಿ.ರವಿ ಅವರಿಗೆ ಇಲ್ಲಿಗೆ ಟಿಕೆಟ್‌ ನೀಡಲಿಲ್ಲ. ಈ ಬಾರಿಯೂ ಅವರ ಹೆಸರು ಮೇಲ್ಮನೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಇರಲಿಲ್ಲ. ರವಿಕುಮಾರ್ ಮತ್ತು ಮುಳೆ ಅವರ ಹೆಸರಿನ ಜತೆಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿರುವ ಸುಮಲತಾ ಅಂಬರೀಶ್‌ ಅವರ ಹೆಸರು ಓಡಾಡುತ್ತಿತ್ತು. ಅವರನ್ನು ಕೈ ಬಿಟ್ಟು ಸಿ.ಟಿ. ರವಿ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ.

ಸತತ 19 ವರ್ಷಗಳ ಕಾಲ ವಿಧಾನಸಭೆ ಸದಸ್ಯರಾಗಿದ್ದ ಸಿ.ಟಿ. ರವಿ ಅವರು ಇದೇ ಮೊದಲ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸುತ್ತಿದ್ದಾರೆ.ಅಭಿನಂದನೆ 

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಮತ್ತೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ, ವಿಜೇಂದ್ರ, ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಷಿ ಸೇರಿದಂತೆ ಎಲ್ಲ ಕೋರ್ ಕಮಿಟಿ ಸದಸ್ಯರು, ಪಾರ್ಲಿಮೆಂಟರಿ ಬೋರ್ಡ್ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಎಲ್ಲಾ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಇದೇ ವೇಳೆ ಮತ್ತಿಬ್ಬರು ಅಭ್ಯರ್ಥಿಗಳಾದ ರವಿಕುಮಾರ್ ಮತ್ತು ಮುಳೆ ಅವರನ್ನು ಅಭಿನಂದಿಸುತ್ತೇನೆ. ಮತ್ತೆ ಪಕ್ಷ ನನಗೆ ಅವಕಾಶ ಮಾಡಿದೆ. ಪಕ್ಷವನ್ನು ಬಲಪಡಿಸುವುದು ನನ್ನ ಕೆಲಸ, ನನ್ನ ಬಗ್ಗೆ ಯೋಚನೆ ಮಾಡುವುದು ಪಕ್ಷದ ಕೆಲಸ, ನಾನೇನಾಗಬೇಕು ಎನ್ನುವುದನ್ನು ನಿರ್ಣಯಿಸುವುದು ಪಕ್ಷ. ನನ್ನ ಜೀವನದಲ್ಲಿ ಆ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದರು.

ಸೋಮವಾರ ನಗರದಲ್ಲಿ ಪದವೀಧರ ಕ್ಷೇತ್ರಕ್ಕೆ ಮತ ಹಾಕಿ ನಂತರ ಬೆಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.

ದತ್ತಪೀಠಕ್ಕೆ ಸಿ.ಟಿ. ರವಿ ಭೇಟಿ

ಚಿಕ್ಕಮಗಳೂರು: ವಿಧಾನಪರಿಷತ್‌ ಟಿಕೆಟ್ ಭಾನುವಾರ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವ ಸಿ.ಟಿ. ರವಿ ಅವರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು.ಬೆಂಗಳೂರಿನಿಂದ ಮಧ್ಯಾಹ್ನ ಆಗಮಿಸುತ್ತಿದ್ದಂತೆ ದತ್ತಪೀಠಕ್ಕೆ ತೆರಳಿ ನಂತರ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಸೋಮವಾರ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಮತದಾನ ಮಾಡಿದ ಬಳಿಕ ಬೆಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.