ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ: ಕಾರಜೋಳ

| Published : Apr 16 2024, 01:02 AM IST

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದು, ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಲಿನಲ್ಲಿ ಕುಳಿತುಕೊಳ್ಳುತ್ತೇನೆ. ಅದೇ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ರಾಹುಲ್ ಗಾಂಧಿ ಅವರ ಹಿಂಭಾಗದಲ್ಲಿ ಕೂರಬೇಕಾಗುತ್ತದೆ.

ಹಿರಿಯೂರು: ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರ ಹಾಗೂ ಹಗರಣಗಳಲ್ಲಿ ತಗುಲಿ ಹಾಕಿಕೊಂಡು ಜೈಲಿಗೆ ಹೋಗಿ ಬಂದು ಜಾಮೀನು ಮೇಲೆ ಹೊರಗಿದ್ದಾರೆ. ಇನ್ನು ಕೆಲವರು ಕೋರ್ಟ್‌ಗೆ ಅಲೆಯುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಲೇವಡಿ ಮಾಡಿದರು. ನಗರದಲ್ಲಿ ಭಾನುವಾರ ಸಂಜೆ ಬಿಜೆಪಿ ಮತ್ತು ಜೆಡಿಎಸ್‌ವತಿಯಿಂದ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದು, ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಲಿನಲ್ಲಿ ಕುಳಿತುಕೊಳ್ಳುತ್ತೇನೆ. ಅದೇ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ರಾಹುಲ್ ಗಾಂಧಿ ಅವರ ಹಿಂಭಾಗದಲ್ಲಿ ಕೂರಬೇಕಾಗುತ್ತದೆ. ಅವರ ಸಂಖ್ಯೆ 30 ಇದ್ದಿದ್ದು 31 ಆಗಬಹುದು ಅಷ್ಟೇ. ಆಡಳಿತ ಪಕ್ಷದ ಸದಸ್ಯ ಲೋಕಸಭೆಯಲ್ಲಿ ಇರಬೇಕು ಹಾಗಾಗಿ ನೀವೆಲ್ಲಾ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಬೇಕು.

ಬರದಿಂದ ರೈತರಿಗೆ ಬೆಳೆ ಕೈಗೆ ಸಿಕ್ಕಿಲ್ಲ. ಕಿಸಾನ್ ಸನ್ಮಾನ್ ಯೋಜನೆಯ ಜೊತೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಜಿಲ್ಲೆಯಲ್ಲಿ 284 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಇದರಿಂದ ರೈತರಿಗೆ ಹಣ ಬಂದಿದೆ. ಇದರಿಂದಾಗಿ ಬರಗಾಲದ ಪರಿಸ್ಥಿತಿಯಲ್ಲಿ ಎಷ್ಟೋ ಸಹಾಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಳಲು ಬಯಸುತ್ತೇನೆ. ಬರ ಬಂದಂತ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಬೇಕಾಗಿತ್ತು. ರೈತರಿಗೆ ಬೆಳೆ ಪರಿಹಾರ ಕೊಡಬೇಕಾಗಿತ್ತು. ಇದ್ಯಾವುದನ್ನು ಕೊಡದೆ ಬರೀ ಭಂಡತನದಿಂದ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಜನರಿಗೆ ಮೋಸ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ದೇಶದಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶದ 140 ಕೋಟಿ ಜನರು ಬಯಸುತ್ತಿದ್ದಾರೆ. ಈಗಾಗಲೇ ಹಲವಾರು ಪತ್ರಿಕೆಗಳು, ಟಿವಿ ಮಾಧ್ಯಮಗಳು, ಅಂತರಾಷ್ಟ್ರೀಯ ಮಾಧ್ಯಮಗಳು ಸರ್ವೆ ನಡೆಸಿದ್ದು, 400ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಕೂಡ ಎರಡು ದೈತ್ಯ ಪಕ್ಷಗಳು ಒಂದಾಗಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರ ಸ್ವಾಮಿಯಂತಹ ವ್ಯಕ್ತಿಗಳು ಒಂದಾಗಿರುವುದರಿಂದ 28 ಲೋಕಸಭಾ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಮೇಲೆ ಯಾವುದೇ ಒಂದೇ ಒಂದು ಪ್ರಕರಣಗಳಿಲ್ಲ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕಳಂಕ ರಹಿತವಾಗಿ ಆಡಳಿತ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 2014ರಲ್ಲಿ ಈಗಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಗೆದ್ದಿದ್ದರು. ಆಗ ಜಿಲ್ಲೆಗೆ ಚಂದ್ರಪ್ಪನವರ ಅಭಿವೃದ್ಧಿ ಶೂನ್ಯವಾಗಿತ್ತು. ಈ ಬಾರಿ ಚುನಾವಣೆಯಲ್ಲಿ ತಾವೆಲ್ಲರೂ ಮನೆಮನೆಗೆ ತೆರಳಿ ಮತದಾನ ಮಾಡಿಸಬೇಕು. 2 ಪಕ್ಷಗಳ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ನಾಳೆಯಿಂದ ಮನೆಮನೆಗೆ ತೆರಳಿ ಮತಯಾಚನೆ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,‌ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ಡಾ.ಸಿದ್ದಾರ್ಥ್ ತಿಪ್ಪಾರೆಡ್ಡಿ, ಎಂ.ರವೀಂದ್ರಪ್ಪ,‌ ಎನ್‌.ಆರ್. ಲಕ್ಷ್ಮೀಕಾಂತ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮುಂತಾದವರು ಹಾಜರಿದ್ದರು.