ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಪ್ರವಾಸಿ ತಾಣ ಮೇಲುಕೋಟೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ ಕೋತಿಯ ಹಿಂಡು ಮಹಿಳಾ ಭಕ್ತರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ನಡೆದಿದೆ.ಬಳ್ಳಾರಿ ಜಿಲ್ಲೆಯಿಂದ ಮಹಿಳೆಯರ ತಂಡ ಸ್ವಾಮಿ ದರ್ಶನಕ್ಕೆ ದೇಗುಲಕ್ಕೆ ಬಂದ ವೇಳೆ ಸರಸ್ವತಿ ಎಂಬ ಮಹಿಳೆ ಮೇಲೆ ಕೋತಿಗಳು ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.ಮಹಿಳೆ ಚಿಕ್ಕಗೋಪುರದ ಬಳಿ ಬಂದಾಗ ಮಹಿಳೆ ತಲೆ ಮೇಲೆ ಹಾರಿ ಕಚ್ಚಿಗಾಯಗೊಳಿಸಿದೆ. ಮಹಿಳೆಗೆ ರಕ್ತ ಸುರಿಯುತ್ತಿದ್ದಾಗ ಸ್ಥಳೀಯರು ಗಾಯಕ್ಕೆ ಹರಿಷಿಣ ಮೆತ್ತಿ ಪ್ರಥಮ ಚಿಕಿತ್ಸೆ ಮಾಡಿದ ನಂತರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ.
ಈಕೆ ಜೊತೆಗೆ ಬಂದ ಮಹಿಳೆಯರ ಮೇಲೂ ಕೋತಿಗಳು ದಾಳಿ ಮಾಡಿದಾಗ ಮಹಿಳೆಯರು ಓಡಿಹೋಗಿ ತಪ್ಪಿಸಿಕೊಳ್ಳುವಾಗ ಮೆಟ್ಟಿಲುಗಳ ಮೇಲೆ ಬಿದ್ದು ಸಣ್ಣಪುಟ್ಟ ಗಾಯವಾಗಿದೆ.ದೇಗುಲದ ಬಳಿ ಕೋತಿಗಳು ಹೆಚ್ಚಿದ್ದು, ಭಕ್ತರ ಮೇಲೆ ದಾಳಿ ಮಾಡುತ್ತಿವೆ. ಅವರ ಬೆಲೆಬಾಳುವ ವಸ್ತುಗಳು ಹಾಗೂ ಮೊಬೈಲ್‌ಗಳನ್ನು ಕಿತ್ತೆಸೆದು ಕಾಟಾ ನೀಡುತ್ತಿವೆ. ಪೂಜಾ ಸಾಮಗ್ರಿ ಕೊಂಡೊಯ್ಯಲೂ ಸಹ ಬಿಡುತ್ತಿಲ್ಲ. ಭಕ್ತರಿಗೆ ನೀಡಿದ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗಲೂ ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಗೋಳಿಗಳು, ಮೇಕೆಗಳ ಕಾಟವೂ ಮಿತಿಮೀರಿದೆ. ಭಕ್ತರನ್ನು ರಕ್ಷಿಸಬೇಕಾದ ಗ್ರಾಪಂ ಅಧಿಕಾರಿ ನಿರ್ಲಕ್ಷ್ಯವಹಿಸಿದ್ದಾರೆ.
ಈ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಡೀಸಿ ಕುಮಾರ ಅವರು ಕೋತಿಗಳನ್ನು ಹಿಡಿದು ಸುರಕ್ಷಿತವಾಗಿ ರಾಷ್ಟ್ರೀಯ ಅಭಯಾರಣ್ಯಗಳಿಗೆ ಬಿಡಲು ಗ್ರಾಪಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈವರೆಗೆ ಕ್ರಮ ವಹಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.ರೈಲಿನಲ್ಲಿ ಗಾಂಜಾ ಸೇವನೆ: ಮೂವರು ಯುವಕರ ಬಂಧನ
ಪಾಂಡವಪುರ:ರೈಲಿನಲ್ಲಿ ಗಾಂಜಾ ಸೇದುತ್ತಿದ್ದ ಮೂವರು ಯುವಕರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಈ ಮೂವರು ಯುವಕರು ಉತ್ತರ ಪ್ರದೇಶದವರು ಎಂದು ಗೊತ್ತಾಗಿದೆ. ತಾಲೂಕಿನ ಚಿಕ್ಕಬ್ಯಾ-ಡರಹಳ್ಳಿ ಅಕ್ಕಪಕ್ಕದ ಆಲೆಮನೆಯಲ್ಲಿ ಕೂಲಿ ಕೆಲಸ ಮಾಡಲು ಬರುತ್ತಿದ್ದರು. ಬೆಂಗಳೂರಿನಿಂದ ಪಾಂಡವಪುರದ ಮೂಲಕ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮೂವರು ಯುವಕರು ಗಾಂಜಾ ಸೇದುತ್ತಿದ್ದರು.ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತಾಲೂಕಿನ ಹುಲ್ಕೆರೆ ಗ್ರಾಮದ ಮಹದೇವ ಮತ್ತು ಕೆಲ ಪ್ರಯಾಣಿಕರು ಈ ಮೂವರು ಯುವಕರನ್ನು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರನ್ನು ವಶಕ್ಕೆ ಪಡೆದಿರುವ ಪಾಂಡವಪುರ ರೈಲ್ವೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.