ಜಿಲ್ಲೆಯಲ್ಲಿ ಮತ್ತೆ ಚುರುಕುಗೊಂಡ ಮುಂಗಾರು

| Published : Jul 02 2025, 11:48 PM IST

ಸಾರಾಂಶ

ಚಿಕ್ಕಮಗಳೂರು, ಕಳೆದ ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಕಾಫಿ ನಾಡಿನಲ್ಲಿ ಬುಧವಾರ ಮತ್ತೆ ಚುರುಕುಗೊಂಡಿದೆ. ಮಲೆನಾಡಿನಲ್ಲಿ ಬಿಡುವಿಲ್ಲದೆ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಬರುತ್ತಿದೆ. ಆದರೆ, ಬಯಲುಸೀಮೆ ತಾಲೂಕುಗಳಲ್ಲಿ ದಟ್ಟವಾದ ಮೋಡ, ಆಗಾಗ ತುಂತುರು ಮಳೆ ಬಂದಿದೆ.

ಮಲೆನಾಡು ತಾಲೂಕುಗಳಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆ, ಬಯಲುಸೀಮೆಯಲ್ಲಿ ಸಾಧಾರಣಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಕಾಫಿ ನಾಡಿನಲ್ಲಿ ಬುಧವಾರ ಮತ್ತೆ ಚುರುಕುಗೊಂಡಿದೆ. ಮಲೆನಾಡಿನಲ್ಲಿ ಬಿಡುವಿಲ್ಲದೆ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಬರುತ್ತಿದೆ. ಆದರೆ, ಬಯಲುಸೀಮೆ ತಾಲೂಕುಗಳಲ್ಲಿ ದಟ್ಟವಾದ ಮೋಡ, ಆಗಾಗ ತುಂತುರು ಮಳೆ ಬಂದಿದೆ.ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಚಿಕ್ಕಮಗಳೂರು ತಾಲೂಕಿನಾದ್ಯಂತ ಆಗಾಗ ಬಿಡುವು ಕೊಟ್ಟು ಮಳೆ ಬಂದಿದೆ. ಆದರೆ, ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆ ಬಂದು ಹೋಗಿದೆ.

ಜಿಲ್ಲೆಯ ಬಯಲುಸೀಮೆಯಲ್ಲಿ ಮುಂಗಾರು ಮಳೆ ಆಶ್ರಿತ ಬೆಳೆ ಬೆಳೆಯಲಾಗುತ್ತಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ವಾಡಿಕೆಗೂ ಮೀರಿ ಮಳೆಯಾಗಿದ್ದರಿಂದ ಫಸಲು ಚೇತರಿಸಿಕೊಂಡಿದೆ. ಕಳೆದ ದಿನಗಳಿಂದ ಬಿಸಿಲಿನ ವಾತಾವರಣ ಇದ್ದು, ಇದೀಗ ಮತ್ತೆ ಮಳೆ ಆರಂಭವಾಗಿದ್ದರಿಂದ ಬೆಳೆಗಳಿಗೆ ಪೂರಕ ವಾತಾವರಣ ಇದೆ ಎಂದು ರೈತರು ಹೇಳುತ್ತಿದ್ದಾರೆ.ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಮುಂದಿನ 24 ಗಂಟೆಗಳಲ್ಲಿ ತುಂಗಾ, ಭದ್ರಾ ಹಾಗೂ ಹೇಮಾವತಿ ಜಲಾಶಯಗಳ ಒಳವು ಪ್ರಮಾಣ ಹೆಚ್ಚಳವಾಗಲಿದೆ.

ವಾಡಿಕೆಗೂ ಮೀರಿದ ಮಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನವರಿ 1 ರಿಂದ ಜುಲೈ 2 ರವರೆಗೆ ಸರಾಸರಿ ವಾಡಿಕೆ ಮಳೆ 529 ಮಿ.ಮೀ. ಆದರೆ, ಈವರೆಗೆ ಬಿದ್ದ ಮಳೆ 775 ಮಿ.ಮೀ. ಅಂದರೆ, ಶೇ. 47 ರಷ್ಟು ಹೆಚ್ಚುವರಿಯಾಗಿ ಮಳೆ ಬಂದಿದೆ. ಇಲ್ಲಿನ 9 ತಾಲೂಕುಗಳ ಪೈಕಿ ಹೆಚ್ಚು ಅಂದರೆ ಶೇ. 107 ರಷ್ಟು ಮಳೆ ಬಂದಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 18.9 ಮಿ.ಮೀ. ಆದರೆ, ಇದೇ ಅವಧಿಯಲ್ಲಿ ಬಂದಿರುವ ಮಳೆ ಶೇ.12 ರಷ್ಟು. ಆದರೆ, ಮುಂದಿನ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಲಿದೆ.

ಮಳೆ: ಮರ ರಸ್ತೆಗುರುಳಿ ಸಂಚಾರ ಅಸ್ತವ್ಯಸ್ತ

ಶೃಂಗೇರಿ: ತಾಲೂಕಿನಾದ್ಯಂತ ಮಂಗಳವಾರ ಸಂಜೆಯಿಂದ ಭಾರೀ ಮಳೆ ಸುರಿದಿದ್ದು, ಕೆರೆಕಟ್ಟೆ ಮಾತೊಳ್ಳಿ ಸಮೀಪ ಮರ ವೊಂದು ರಸ್ತೆಗುರುಳಿ ಬಿದ್ದು ರಾಷ್ಟ್ರೀಯ ಹೆ. 169 ರ ಮಂಗಳೂರು ಶೃಂಗೇರಿ ರಸ್ತೆ ಸಂಪರ್ಕ ಕೆಲಹೊತ್ತು ಅಸ್ತವ್ಯಸ್ತ ಗೊಂಡಿತ್ತು.

ಮಂಗಳವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿಯಿಡೀ ಅಬ್ಬರಿಸಿ ಬುಧವಾರ ಮಧ್ಯಾಹ್ನದವರೆಗೂ ಎಡಬಿಡದೆ ಸುರಿಯಿತು. ಕಳೆದೆರೆಡು ದಿನಗಳಿಂದ ಕೊಂಚ ಬಿಡುವು ನೀಡಿದ್ದರೂ ಮಂಗಳವಾರ ಸಂಜೆಯಿಂದ ಮತ್ತೆ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ.

ಮಳೆ ಸುರಿಯುತ್ತಿರುವುರಿಂದ ತನಿಕೋಡು, ನೆಮ್ಮಾರು ಸಾಲ್ಮರ, ತ್ಯಾವಣ,ಆನೆಗುಂದ ಸೇರಿದಂತೆ ತಾಲೂಕಿನ ವಿವಿಧೆಡೆ ಗುಡ್ಡಕುಸಿದು ಮಣ್ಣು ರಸ್ತೆಗೆ ಬೀಳುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆಯೆಲ್ಲ ಕೆಸರು ಮಯವಾಗುತ್ತಿದೆ. ಗಾಳಿ ಮಳೆಯ ಆರ್ಭಟಕ್ಕೆ ಮರಗಳು ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು, ಲೈನ್ಗಳು ತುಂಡಾಗಿ ಬೀಳುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಳ್ಳುತ್ತಿದೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಮತ್ತೆ ಹೆಚ್ಚಳ ವಾಗಿದ್ದು, ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದೆ. ಬುಧವಾರ ಸಂಜೆವರೆಗೂ ಮಳೆ ಆರ್ಭಟ ಮುಂದುವರಿದಿತ್ತು.

2 ಶ್ರೀ ಚಿತ್ರ 3-

ಶೃಂಗೇರಿ ಸುತ್ತಮುತ್ತ ಸುರಿಯುತ್ತಿರುವ ಭಾರೀ ಮಳೆಯಿಂದ ರಾ.ಹೆ 169 ರ ಕೆರೆಕಟ್ಟೆ ಮಾತೊಳ್ಳಿ ಬಳಿ ರಸ್ತೆ ಮೇಲೆ ಮರಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿರುವುದು.