ಸಾರಾಂಶ
ಯಕ್ಷಗಾನ ತಾಳಮದ್ದಳೆಯ 500 ಕ್ಯಾಸೆಟ್‌ಗಳನ್ನು ಸಂಗ್ರಹಿಸಿ, ಧ್ವನಿಯನ್ನು ಕಂಪ್ಯೂಟರಿಗೆ ವರ್ಗಾಯಿಸಿ, ಆಸಕ್ತರಿಗೆ ಪೆನ್‌ಡ್ರೈವ್ ಮೂಲಕ ಹಂಚುವ ಕಾಯಕಕ್ಕೆ ತುಂಬ ಸಹನೆ ಬೇಕು. ಅದನ್ನು ಸಾಗರದ ಎಂ.ಎಲ್. ಭಟ್ ತಪಸ್ಸಿನಂತೆ ಆಚರಿಸಿ ಸದ್ದಿಲ್ಲದೆ ಕಲಾಸೇವೆ ಮಾಡಿದ್ದಾರೆ.
ವಿಶೇಷ ವರದಿಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನ ವೈಭವವನ್ನು ನೂರಾರು ಭಾಗವತರು, ಪಾತ್ರಧಾರಿಗಳು, ಹಿಮ್ಮೇಳ ಮುಮ್ಮೇಳದ ಕಲಾವಿದರು, ನೇತಾರರು ಕಟ್ಟಿಕೊಟ್ಟಿರುವ ಕಾಲಘಟ್ಟ ನೆನಪಿನ ಬಡಿತವಾಗಿ ಮಾತ್ರ ಉಳಿಯಬಹುದು ಎಂಬ ಆತಂಕದ ನಡುವೆ, ಕೆಲವರು ಸದ್ದಿಲ್ಲದೇ ತಮ್ಮ ವೈಯಕ್ತಿಕ ತವಕದಿಂದ, ಕಾಲಚಕ್ರದ ಹೊಡೆತದಿಂದ ಪಾರಾಗದ ಅನೇಕ ಧ್ವನಿಚಿತ್ರಗಳನ್ನು ಉಳಿಸಿ ನಮ್ಮ ಮುಂದೆ ಇಡುತ್ತಿದ್ದಾರೆ. ಇಂತಹ ಅಪರೂಪದ ಸಾಧಕರ ಪೈಕಿ ಎಂ.ಎಲ್. ಭಟ್ ಹೆಸರು ಮುಂಚೂಣಿಯಲ್ಲಿದೆ.ಸತತ ಮೂರು ವರ್ಷಗಳ ಅವಿರತ ಶ್ರಮ, ತಂತ್ರಜ್ಞಾನದಲ್ಲಿ ನಿಭಾಯಿಸಬೇಕಾದ ಸವಾಲುಗಳು, ಧ್ವನಿಮುದ್ರಣದ ನವೀಕರಣದಲ್ಲಿ ತೊಂದರೆಗಳು, ಇವೆಲ್ಲದರ ಮಧ್ಯೆ ಸುಮಾರು 500 ಹಳೆಯ ಯಕ್ಷಗಾನ ಕ್ಯಾಸೆಟ್‌ಗಳಿಗೆ ಮರು ಜನ್ಮನೀಡಿದವರು ಇವರು. ಅವರದೇ ಭಾಷೆಯಲ್ಲಿ ಹೇಳುವುದಾದರೆ ಕ್ಯಾಸೆಟ್‌ಗಳಿಗೆ ‘ಶಸ್ತ್ರಚಿಕಿತ್ಸೆ’ ಮಾಡಿ, ಅವುಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಉಳಿಸುವ ಕಾಯಕ ಮಾಡಿದ್ದಾರೆ. ಕ್ಯಾಸೆಟ್‌ಗಳ ಧ್ವನಿಯನ್ನು ಕಂಪ್ಯೂಟರಿಗೆ ವರ್ಗಾಯಿಸಿ, ಡಿಜಿಟಲ್ ಆಡಿಯೋ ಕ್ಲಿಪ್ ಆಗಿ ಪರಿವರ್ತಿಸಿ, ಅದನ್ನು ವಾಟ್ಸಪ್ ಗ್ರೂಪುಗಳಲ್ಲಿ ಉಚಿತವಾಗಿ ದಿನಾ ಹಂಚುತ್ತಾ ಬಂದಿದ್ದಾರೆ. ಮಾತ್ರವಲ್ಲ, ಆಸಕ್ತರಿಗೆ ಪೆನ್ ಡ್ರೈವ್‌ಗಳಿಗೆ ಭಟ್ಟಿ ಇಳಿಸಿ ಅಂಚೆಯಲ್ಲಿ ಕಳುಹಿಸುತ್ತಾರೆ. ಈ ಕಾರ್ಯದಲ್ಲಿ ಅವರು ತೋರಿದ ಶ್ರದ್ಧೆ, ಶಿಸ್ತಿನ ಸಂಕೇತ, ಮತ್ತು ಕಲೆಯ ಮೇಲಿನ ಗೌರವ ಎಂಥದ್ದೆಂದರೆ, ಇದನ್ನು ಒಂದು ಅಪರೂಪದ ಕಲಾಸೇವೆ ಎಂದೇ ಗುರುತಿಸಬೇಕು.ವೈಯಕ್ತಿಕ ಹಿನ್ನೆಲೆ:
ಮರವಂತೆ ಎಂಬ ಕುಂದಾಪುರ ತಾಲೂಕಿನ ತಟಪ್ರದೇಶದಲ್ಲಿ 1964ರ ಫೆ.18ರಂದು ಜನಿಸಿದ ಎಮ್.ಎಲ್. ಭಟ್ ಅವರ ತಂದೆ ಶ್ರೀ ಶೇಷ ಭಟ್ಟ ಮತ್ತು ತಾಯಿ ಲಕ್ಷ್ಮೀ ಅಮ್ಮ. ಪಾರಂಪರಿಕವಾಗಿ ವೈದಿಕ ವೃತ್ತಿ ಮತ್ತು ಯಕ್ಷಗಾನದ ಹವ್ಯಾಸವಿರುವ ಮನೆತನದಲ್ಲಿ ಜನಿಸಿದ, ಅವರ ಶ್ರದ್ಧೆ ಮತ್ತು ಆಸಕ್ತಿಯ ಕಾರಣದಿಂದಲಾಗಿ ಮನಸ್ಸು ಕಲೆಯತ್ತ ಹೋಯಿತು. ಎಂ.ಕಾಂ ಪದವಿಧರ ಭಟ್, ಭಾರತೀಯ ಜೀವ ವಿಮಾ ನಿಗಮದಲ್ಲಿ 33 ವರ್ಷಗಳ ಕಾಲ ಅಭಿವೃದ್ಧಿ ಅಧಿಕಾರಿಯಾಗಿ ದುಡಿದು ನಿವೃತ್ತ ಜೀವನವನ್ನು ಸಾಗರದ ನೆಲದಲ್ಲಿ ಕಂಡುಕೊಂಡಿದ್ದಾರೆ.ಯಕ್ಷಗಾನವನ್ನು ಕೇವಲ ಮನರಂಜನೆಯಾಗಿ ನೋಡುವ ಬದಲು, ಭಟ್ ಅದನ್ನು ಒಂದು ಚಿಂತನೆ, ಸಂಸ್ಕೃತಿ ಮತ್ತು ಇತಿಹಾಸವಾಗಿ ನೋಡುವ ದೃಷ್ಟಿಕೋನ ಹೊಂದಿದ್ದಾರೆ. ಕಳೆದ 50 ವರ್ಷಗಳಿಂದ ಅವರು ಯಕ್ಷಗಾನ ಪ್ರೇಕ್ಷಕ ಮಾತ್ರವಲ್ಲ, ಛಾಯಾಗ್ರಾಹಕ, ಸಂಘಟಕ, ಲೇಖಕ, ಹಳೆಯ ಧ್ವನಿಮುದ್ರಣಗಳ ಸಂಗ್ರಹಕ, ಹಾಗೂ ವಿವಿಧ ವೃತ್ತಿ ತರಬೇತಿ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶಕರಾಗಿಯೂ ತೊಡಗಿಸಿದ್ದಾರೆ.ಹಳೆಯ ಕ್ಯಾಸೆಟ್ ರೀಲುಗಳು ಕಾಲಕ್ರಮೇಣ ಹಾಳಾಗುತ್ತವೆ, ಅವಗಳನ್ನು ಮತ್ತೆ ಕೇಳುವ ಟೇಪ್‌ರೆಕಾರ್ಡ್‌ರುಗಳೂ ಈಗ ಸಿಗುವುದಿಲ್ಲ, ಹಳತು ರಿಪೇರಿಯೂ ಆಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ 500 ಕ್ಯಾಸೆಟ್‌ಗಳನ್ನು ಸಂಗ್ರಹಿಸಿ, ಧ್ವನಿಯನ್ನು ಕಂಪ್ಯೂಟರಿಗೆ ವರ್ಗಾಯಿಸಿ, ಆಸಕ್ತರಿಗೆ ಪೆನ್‌ಡ್ರೈವ್ ಮೂಲಕ ಹಂಚುವ ಕಾಯಕಕ್ಕೆ ತುಂಬ ಸಹನೆ ಬೇಕು. ಅದನ್ನವರು ತಪಸ್ಸಿನಂತೆ ಸಾಧಿಸಿದ್ದಾರೆ.ಅವರ ಪತ್ನಿ ಹೇಮಾ ಎಲ್. ಭಟ್ ಶಿಕ್ಷಣ ಕ್ಷೇತ್ರದಲ್ಲಿ ಉತ್ಸಾಹ ಹೊಂದಿದ್ದು, ಸಹಜವಾಗಿ ಭಟ್ ಅವರ ಸಾಂಸ್ಕೃತಿಕ ಹವ್ಯಾಸಗಳಿಗೆ ಬಲವಾಗಿದ್ದಾರೆ. ಇವರ ಪುತ್ರ ಶಶಿಕಿರಣ ಎಂ. ಗಣಕಯಂತ್ರ ತಾಂತ್ರಿಕ ತಜ್ಞರಾಗಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡವರು.ಇವರ ಈ ಮಹತ್ಕಾರ್ಯ ಗುರುತಿಸಿ, ಇವರನ್ನು ಜು.6ರಂದು ಕಾಸರಗೋಡಿನ ಸಿರಿಬಾಗಿಲಿನಲ್ಲಿ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ ಸಿರಿಬಾಗಿಲು, ಕಾಸರಗೋಡು.ಇವರು ಸನ್ಮಾನಿಸಲಿದ್ದಾರೆ.-ಬರೆಹ: ಕುಮಾರ ಸುಬ್ರಹ್ಮಣ್ಯ ಮುಳಿಯಾಲ.