ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಗುರುವಾರ ಸಂಜೆ ಮಳೆರಾಯ ಬೊಬ್ಬಿರಿದಿದ್ದು ಮುಂಗಾರು ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಾ.ನಗರ, ಗುಂಡ್ಲುಪೇಟೆ ತಾಲೂಕು ಭಾಗದಲ್ಲಿ ಜೋರು ಮಳೆಯಾಗಿದ್ದು ರಸ್ತೆಗಳ ಮೇಲೆ ಹೊಳೆಯಂತೆ ನೀರು ಹರಿದ ಪರಿಣಾಮ ವಾಹನ ಸಂಚಾರವೇ ದುಸ್ತರವಾಗಿದೆ. ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಕರ್ನಾಟಕ ಗಡಿಯಾದ ಪುಣಜನೂರು ಗೇಟ್ ವರುಣನ ಆರ್ಭಟಕ್ಕೆ ವಾಹನ ಸವಾರರು ಪರದಾಡಿದರು.ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಡ್ಡರ ಹೊಸಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್ದಾಗಿದ್ದು ನೀರಿನ ಹರಿವು ಕಡಿಮೆ ಆಗುವುದನ್ನೇ ಜನರು ಕಾಯುತ್ತಿದ್ದಾರೆ. ಅಣ್ಣೂರುಕೇರಿ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದ್ದು, ಅಣ್ಣೂರುಕೇರಿ ಗ್ರಾಮದ ಹಲವು ಬೀದಿಗಳು ಜಲಾವೃತವಾಗಿದೆ.ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಹಾಗೂ ತೊಂಡವಾಡಿ ಸಂಪರ್ಕ ರಸ್ತೆಯೇ ಮುಳುಗಡೆಯಾಗಿದ್ದು ವಾಹನ ಸಂಚಾರ ಬಂದಾಗಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಹಿರಿಕಾಟಿ ಗೇಟ್ ನಲ್ಲಿ ನೀರು ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗಿತ್ತು. ಗುಂಡ್ಲುಪೇಟೆ ತಾಲೂನಿನ ಬೊಮ್ಮಲಾಪುರ, ಶಿವಪುರ, ನೇನೆಕಟ್ಟೆ, ಮಂಚಹಳ್ಳಿ ಭಾಗಗಳಲ್ಲಿ ಜೋರು ಮಳೆಗೆ ಜಮೀನುಗಳು ಜಲಾವೃತವಾಗಿದ್ದು ಹಲವು ಕಟ್ಟೆಗಳು ತುಂಬಿ ಹರಿಯುತ್ತಿದೆ.ಗೋಡೆ ಕುಸಿತ: ಹನೂರಿನಲ್ಲಿ ಗುರುವಾರ ಸಂಜೆ ಬಿದ್ದ ಮಳೆಗೆ ಕುಮಾರ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು 50 ಸಾವಿರಕ್ಕೂ ಹೆಚ್ಚು ಬೆಲೆಬಾಲುವ ಸಾಮಾಗ್ರಿಗಳು ನಾಶವಾಗಿವೆ. ಹಾಗೂ ಮನೆಯ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ಶೀಟ್‌ಗಳು ಜಖಂಗೊಂಡಿದೆ.ಘಟನೆ ವಿವರ: ಹನೂರಿನಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಕುಮಾರ್ ಎಂಬುವವರ ಮನೆಯ ಗೋಡೆ ಗುರುವಾರ ಸಂಜೆ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಹೊಸದಾಗಿ ಮಳಿಗೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಏಕಾಏಕಿ ಗೋಡೆ ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ಶೀಟ್‌ಗಳು , ಪೈಪ್ ಜಖಂಗೊಂಡಿದೆ. ಇನ್ನು ಹೊಸದಾಗಿ ಮಳಿಗೆ ನಿರ್ಮಾಣ ಮಾಡುತ್ತಿದ್ದ ರಾಜು ಎಂಬುವರ ಶೀಟ್ , ಪೈಪ್ ಗಳು ಜಖಂಗೊಂಡಿರುವುದರಿಂದ ಇವರದ್ದು ಸಹ 40 ಸಾವಿರ ಬೆಲೆ ಬಾಳುವ ಸಾಮಗ್ರಿಗಳು ನಷ್ಟವಾಗಿರುವುದರಿಂದ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಭಾರಿ ಮಳೆಗೆ ಗೋಡೆ ಕುಸಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕೆಂದು ಕುಮಾರ್ ಮನವಿ ಮಾಡಿದ್ದಾರೆ.6ಸಿಎಚ್‌ಎನ್21
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಡ್ಡರ ಹೊಸಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದಾಗಿರುವುದು.ಕೋಡಿ ಬಿದ್ದ ದೇವರಕೆರೆ, ಅಗಸನಕಟ್ಟೆ ಕೆರೆಗುಂಡ್ಲುಪೇಟೆ: ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದ ಅವಳಿ ಕೆರೆಗಳಾದ ದೇವರಕೆರೆ, ಅಗಸನಕಟ್ಟೆ ಕೆರೆ ಗುರುವಾರ ಬಿದ್ದ ಮಳೆಗೆ ತುಂಬಿ ಕೋಡಿ ಬಿದ್ದು, ಕೆರೆಯ ಏರಿಯ ಮೇಲೆಯೇ ಹರಿಯುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಎರಡು ಕೆರೆಗಳ ಕೋಡಿ ಸ್ವಲ್ಪ ಬಿರುಕು ಬಿಟ್ಟಿದೆ. ನೀರು ನಿಲ್ಲದೆ ಕೋಡಿ ಒಡೆದರೆ ರೈತರು ಬಿತ್ತನೆ ಮಾಡಿದ ಫಸಲು ನೀರಿನಲ್ಲಿ ಹೋಮವಾಗುತ್ತದೆ ಎಂಬ ಆತಂಕ ರೈತರಲ್ಲಿ ಎದುರಾಗಿದೆ. ಗ್ರಾಪಂ ಸದಸ್ಯ ನರಸಿಂಹ ಮಾತನಾಡಿ, ಕೆರೆ ಕೋಡಿ ಸಂಬಂಧ ಗ್ರಾಪಂ ಪಿಡಿಒ ಜೊತೆ ಮಾತನಾಡಿದ್ದು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.